ರಾಯಚೂರು: ತಾಲೂಕಿನ ಮರ್ಚೆಟಹಾಳ ಗ್ರಾಮದಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಸಿದವರನ್ನು ಬಂಸುವಂತೆ ಒತ್ತಾಯಿಸಿ ದಲಿತ ಮತತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಮರ್ಚೆಟಹಾಳ ಗ್ರಾಮದಿಂದ ರಾಯಚೂರಿನ ಜಿಲ್ಲಾಕಾರಿ ಕಚೇರಿವರೆಗೆ ಶುಕ್ರವಾರ ಕಾಲ್ನಡಿಗೆ ಜಾಥಾ ನಡೆಸಲಾಯಿತು.
ನಂತರ ಅಪರ ಜಿಲ್ಲಾಕಾರಿ ಡಾ.ಕೆ.ಆರ್.ದುರಗೇಶಗೆ ಮನವಿ ಸಲ್ಲಿಸಿ, ಗ್ರಾಮದಲ್ಲಿ ದಲಿತರ ಕೇರಿಗೆ ನುಗ್ಗಿ ಮಹಿಳೆಯರು ಸೇರಿದಂತೆ ಹಲವರ ಮೇಲೆ ಹಲ್ಲೆ ನಡೆಸಲಾಗಿದ್ದು, ಘಟನೆ ನಡೆದು 20 ದಿನ ಕಳೆದರೂ ಇಬ್ಬರನ್ನು ಮಾತ್ರ ಬಂದಿಸಿ ಇನ್ನುಳಿದ ಆರೋಪಿಗಳನ್ನು ಬಂಸಿಲ್ಲ ಎಂದು ದೂರಿದರು.
ಒಕ್ಕೂಟದ ಸಂಚಾಲಕ ಎಸ್.ಮಾರೆಪ್ಪ ಮಾತನಾಡಿ, ಮರ್ಚೆಟಹಾಳ ಗ್ರಾಮದಲ್ಲಿ ಶ್ರೀಧರ, ರಾಜಣ್ಣ ಮತ್ತು ರಾಘವೇಂದ್ರ ಎಂಬುವವರ ಕುಮ್ಮಕ್ಕಿನಿಂದ ನೂರಾರು ಜನರು ದಲಿತರ ಕೇರಿಗೆ ನುಗ್ಗಿ ಸಿಕ್ಕಸಿಕ್ಕವರನ್ನೆಲ್ಲ ಓಡಾಡಿಸಿ ಹಲ್ಲೆ ಮಾಡಿದ್ದಾರೆ. ಬಿಡಿಸಲು ಬಂದ ಮಹಿಳೆಯರನ್ನು ಎಳೆದಾಡಿದ್ದಾರೆ.
ಘಟನೆ ಕುರಿತು ಯರಗೇರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಆರೋಪಿಗಳನ್ನು ಬಂಸಿದೆ ಪೊಲೀಸರು ನಿರ್ಲಕ್ಷ ವಹಿಸಿದ್ದಾರೆ. ಹಲ್ಲೆ ಮಾಡಿದ ಆರೋಪಿಗಳು ಗ್ರಾಮದಲ್ಲಿ ರಾಜಾರೋಷವಾಗಿ ತಿರುಗಾಡಿ ಬೆದರಿಕೆ ಹಾಕುತ್ತಿದ್ದಾರೆ. ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ.
ದಲಿತರಿಗೆ ರಕ್ಷಣೆ ನೀಡಬೇಕಾದ ಪೊಲೀಸರು ಹಗಲಿನಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಿ ರಾತ್ರಿ ವೇಳೆ ಮಾಯವಾಗುತ್ತಾರೆ. ಆರೋಪಿಗಳು ಮತ್ತವರ ಬೆಂಬಲಿಗರು ದಾಂಧಲೇ ಮಾಡುವುದು ಪ್ರಾರಂಭವಾಗಿದೆ. ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದ ವಾತಾವರಣ ಇದೆ.
ದೌರ್ಜನ್ಯ ಎಸಗಿದ ಎಲ್ಲ ಆಆರೋಪಿಗಳನ್ನು ಕೂಡಲೇ ಬಂಸಬೇಕು. ಆರೋಪಿಗಳಿಗೆ ರಕ್ಷಣೆ ನೀಡುತ್ತಿರುವ ಪೊಲೀಸರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು. ಗ್ರಾಮದಲ್ಲಿನ ದಲಿತರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಜಾಥಾದಲ್ಲಿ ಒಕ್ಕೂಟದ ಪದಾಕಾರಿಗಳಾದ ಜೆ.ಬಿ.ರಾಜು, ರವೀಂದ್ರನಾಥ ಪಟ್ಟಿ, ಹೇಮರಾಜ ಅಸ್ಕಿಹಾಳ, ಎಂ.ಆರ್.ಭೇರಿ, ರಾಘವೇಂದ್ರ ಬೋರೆಡ್ಡಿ, ಹನುಮಂತಪ್ಪ ಮನ್ನಾಪುರ, ಆಂಜಿನಯ್ಯ, ನರಸಿಂಹಲು, ಶ್ರೀನಿವಾಸ ಕಲವಲದೊಡ್ಡಿ, ಪ್ರಸಾದ ಭಂಡಾರಿ, ಶ್ರೀನಿವಾಸ ಕೊಪ್ಪರ, ಆಂಜಿನಯ್ಯ ಕುರುಬದೊಡ್ಡಿ, ಅಬ್ರಾಹಂ ಪಾಲ್ಗೊಂಡಿದ್ದರು.