ಬಾಗಲಕೋಟೆ ತಾಲೂಕಿನ, ಬೀಳಗಿ ಮತಕ್ಷೇತ್ರ ವ್ಯಾಪ್ತಿಯ ಕಲಾದಗಿ ಗ್ರಾಮದ ಕಲ್ಲೊಳ್ಳೆಪ್ಪ ಮಾದರ ಮನೆಯಲ್ಲಿ ಶನಿವಾರ ಸಚಿವರಾದ ಆರ್.ಅಶೋಕ, ಮುರುಗೇಶ ನಿರಾಣಿ ಉಪಹಾರ, ಜವಾರಿ ರೊಟ್ಟಿ ಸವಿದರು. 
ಜಿಲ್ಲೆ

ದಲಿತರ ಮನೆಯಲ್ಲಿ ಉಪಹಾರ ಸವಿದ ಸಚಿವ ಆರ್.ಅಶೋಕ

ಬಾಗಲಕೋಟೆ: ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಡಿಯಲ್ಲಿ ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ಆರ್.ಅಶೋಕ ಭಾನುವಾರ ಬೆಳಗ್ಗೆ ದಲಿತರ ಮನೆಯಲ್ಲಿ ಉಪಹಾರ, ಜವಾರಿ ರೊಟ್ಟಿ ಸವಿದರು.
ಬಾಗಲಕೋಟೆ ತಾಲೂಕಿನ, ಬೀಳಗಿ ಮತಕ್ಷೇತ್ರ ವ್ಯಾಪ್ತಿಯ ಕಲಾದಗಿ ಗ್ರಾಮದಲ್ಲಿ ಶನಿವಾರ ಗ್ರಾಮ ವಾಸ್ತವ್ಯ ಮಾಡಿ ಸ್ಥಳೀಯವಾಗಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ನಂತರ ಸಮೀಪದ ಖಜ್ಜಿಡೋಣಿ ಗ್ರಾಮದ ಸರ್ಕಾರಿ ಹಾಸ್ಟೆಲ್‌ನಲ್ಲಿ ರಾತ್ರಿ ಮಲಗಿದರು. ಬೆಳಗ್ಗೆ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಕಾಲ ಕಳೆದು ಸಂವಾದ ನಡೆಸಿದರು.
ಬಳಿಕ ಕಲಾದಗಿ ಗ್ರಾಮದ ವಿದ್ಯಾನಗರದಲ್ಲಿ ಕಲ್ಲೊಳ್ಳಿಪ್ಪ ಹಾಗೂ ಆನಂದ ಮಾದರ ಮನೆಗೆ ಆಗಮಿಸಿದರು. ಸಚಿವರಿಗೆ ಆರುತಿ ಮಾಡಿ ಬರಮಾಡಿಕೊಳ್ಳಲಾಯಿತು. ಬಳಿಕ ಕುಟುಂಬದವರು ಸಿದ್ಧಪಡಿಸಿದ್ದ ಉಪ್ಪಿಟ್ಟು, ಅವಲಕ್ಕಿ ಬಾತ್, ಚುರುಮುರಿ ಖಾರ್ ಉಪಹಾರ ಹಾಗೂ ತಾವೇ ಕೇಳಿ ಖಡಕ್ ರೊಟ್ಟಿ ಮಡಕಿ, ಹೆಸರ ಕಾಳು ಪಲ್ಲೆ, ಮೊಸರು ಉತ್ತರ ಕರ್ನಾಟಕ ಜವಾರಿ ಊಟ ಸವಿದರು. ಮಾದರ ಕುಟುಂಬಸ್ಥರು ನಮ್ಮದು ಸ್ಪೇಷಲ್ ಅಡುಗೆ ಸರ್ ತಾವು ಸವಿಬೇಕು ಅಂತ ಪ್ರೀತಿಯಿಂದ ಸಚಿವರಿಗೆ ಉಣಬಡಿಸಿದರು. ಈ ವೇಳೆ ಸಚಿವ ಆರ್.ಅಶೋಕ ಬಡವರು ಮನೆ ಊಟ ಸವಿಯುವುದೇ ಒಂದು ಖುಷಿ ಸಂಗತಿ ಅಂತ ಸಂತೋಷ ವ್ಯಕ್ತಪಡಿಸಿ ಸ್ವತಃ ತಾವೇ ಪ್ಲೇಟ್ ಎತ್ತಿಟ್ಟು ಮೆಚ್ಚುಗೆಗೆ ಪಾತ್ರರಾದರು. ಇನ್ನು ಕುಟುಂಬಸ್ಥರ ಸನ್ಮಾನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕ ಸಚಿವ ಮುರುಗೇಶ ನಿರಾಣಿ, ವಿ.ಪ ಸದಸ್ಯ ಹನುಮಂತ ನಿರಾಣಿ, ಬಾಗಲಕೋಟೆ ಉಪವಿಭಾಗಾಧಿಕಾರಿ ಶ್ವೇತಾ ಬಿಡಿಕರ ಸಾಥ್ ನೀಡಿದರು.

ವೈಯಕ್ತಿಕ ಸಹಾಯಧ ಘೋಷಣೆ
ಮಾದರ ಕುಟುಂಬಸ್ಥರೊಂದಿಗೆ ಕುಶಲೋಪರಿ ವಿಚಾರಿಸಿದರು. ಮಾದರ ಕುಟುಂಬಸ್ಥರು ತಮಗೆ ಇರುವ ಸಮಸ್ಯೆ, ಸಂಕಟ ಸಚಿವರ ಮುಂದೆ ಬಿಚ್ಚಿಟ್ಟರು. ಬಳಿಕ ಸಚಿವ ಆರ್.ಅಶೋಕ ಬೆಂಗಳೂರು ತಲುಪಿದ ತಕ್ಷಣ ಎರಡು ಲಕ್ಷ ರೂ. ವೈಯಕ್ತಿಕವಾಗಿ ನೀಡುತ್ತೇನೆ. ಮಕ್ಕಳ ಶಿಕ್ಷಣಕ್ಕೆ ಬಳಸಬೇಕು. ಯಾವುದೇ ಕಾರಣಕ್ಕೂ ದುಂದು ವೆಚ್ಚ ಮಾಡಬಾರದು ಎಂದು ಮನವಿ ಮಾಡಿದರು. ಸಚಿವರಾದ ಆರ್.ಅಶೋಕ, ಮುರುಗೇಶ ನಿರಾಣಿ ಸರಳತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.