ಜಿಲ್ಲೆ

ದಲಿತರ-ಕಾರ್ಮಿಕರ ಜೀವನ ಸುಧಾರಣೆಗೆ ಕ್ರಮ

ಕಾನಹೊಸಹಳ್ಳಿ: ಡಾ.ಬಾಬು ಜಗಜೀವನರಾಮ್ ದೇಶದ ಎಲ್ಲ ವರ್ಗದ ತಳ ಸಮುದಾಯದ ಜನರ ಆಶೋತ್ತರಗಳು ಮತ್ತು ಅವರ ನೆಮ್ಮದಿ ಜೀವನಕ್ಕಾಗಿ ಹೋರಾಟ ಮಾಡಿದ ಮಹಾನ್ ನಾಯಕರಾಗಿದ್ದಾರೆ ಎಂದು ಉಪ ತಹಸೀಲ್ದಾರ್ ಎಂ.ಚಂದ್ರಮೋಹನ್ ಹೇಳಿದರು.

ಗ್ರಾಮದ ನಾಡಕಚೇರಿಯಲ್ಲಿ ಡಾ.ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ಡಾ.ಬಾಬು ಜಗಜೀವನರಾಮ್ ಅವರು ಕೇಂದ್ರ ಸರ್ಕಾರದಲ್ಲಿ ಕಾರ್ಮಿಕ ಮಂತ್ರಿಯಾಗಿ ನೊಂದವರ, ದಲಿತರ ಮತ್ತು ಕಾರ್ಮಿಕರ ಜೀವನ ಕ್ರಮ ಸುಧಾರಣೆಗೆ ಕ್ರಮ ವಹಿಸಿದ್ದಾರೆ. ದಲಿತರ ಮತ್ತು ರೈಲೈ ಕಾರ್ಮಿಕರ ಪರವಾಗಿ ಮಾಡಿದ ಕ್ರಾಂತಿಕಾರಕ ಬದಲಾವಣೆಗಳನ್ನು ಪ್ರತಿಯೊಬ್ಬರು ಸ್ಮರಣೆ ಮಾಡಿಕೊಳ್ಳಬೇಕೆಂದು ತಿಳಿಸಿದರು.

ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ಎಳನೀರು ಗಂಗಣ್ಣ ಮಾತನಾಡಿ, ಡಾ.ಬಾಬು ಜಗಜೀವನರಾಮ್ ಅವರ ಹೋರಾಟ ಅವಿಸ್ಮರಣೀಯವಾಗಿದ್ದು, ಅವರ ಕ್ರಾಂತಿಕಾರಕ ಚಿಂತನೆಗಳು ಯುವಪೀಳಿಗೆಗೆ ಸ್ಫೂರ್ತಿಯಾಗಿವೆ ಎಂದರು.

ತಾಲೂಕು ಸರ್ವೇಯರ್ ಮಂಜುನಾಥ, ಗ್ರಾಮಲೆಕ್ಕಿಗರಾದ ಅನೀತಾ ಪೂಜಾರ್, ಅಂಬುಜಾಕ್ಷಿ, ಚನ್ನಬಸಯ್ಯ, ಗ್ರಾಪಂ ಸದಸ್ಯರಾದ ಹೊನ್ನೂರಸ್ವಾಮಿ, ಅಡವಿಜ್ಜರ ನಾಗೇಶ್, ತಿಪ್ಪೇಸ್ವಾಮಿ, ಅಗ್ರಹಾರ ಮಂಜುನಾಥ, ಸಿದ್ದೇಶಿ ಇದ್ದರು.