ಜಿಲ್ಲೆ

ದಲಿತರ ಅನುಭವ ಮುಗಿಯದ ಜೀವದ್ಯವ್ಯ

ಚಾಮರಾಜನಗರ: ನಾಡಿನ ಬಹುಪಾಲು ಬರಹಗಾರರು ದಲಿತರ ಜೀವನ ಕಥನಗಳನ್ನು ಸಾಹಿತ್ಯ ರೂಪಕ್ಕೆ ತರುತ್ತಿದ್ದರೂ, ಎಷ್ಟೇ ಬರೆದರೂ ಮುಗಿಯದ ಅನುಭವ ಜೀವದ್ರವ್ಯವಾಗಿದೆ ಎಂದು ಖ್ಯಾತ ಸಂಸ್ಕೃತಿ ಚಿಂತಕ ಬಂಜಗೆರೆ ಜಯಪ್ರಕಾಶ್ ಬಣ್ಣಿಸಿದರು.

ನಗರದ ರೋಟರಿ ಭವನದಲ್ಲಿ ಬೆಂಗಳೂರಿನ ಒನ್ ವೀಲ್ಹರ್ ಪ್ರಕಾಶನ ಹಾಗೂ ರೋಟರಿ ಸಂಸ್ಥೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಕಥೆಗಾರ ಮಧುಕರ ಮಳವಳ್ಳಿ ಅವರ ಮೊದಲ ಜೋಡು ಕಥಾ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಮೊದಲ ದಲಿತ ಲೇಖಕ ಎಂದು ಗುರುತಿಸುವ ದೇವನೂರು ಮಹಾದೇವ ಅವರು ಕಿರುಬರಹಗಳನ್ನೇ ಬರೆದರೂ, ಅದು ಸಾಹಿತ್ಯ ಲೋಕದಲ್ಲಿ ಉಂಟು ಮಾಡಿದ ಸಂಚಲನ ಬಹುಮುಖ್ಯವಾಗುತ್ತದೆ. ಬಳಿಕ ಬಂದ ಹಲವಾರು ಹಿಂದುಳಿದ, ಅಲ್ಪಸಂಖ್ಯಾತ, ಮಹಿಳಾ ಹಾಗೂ ದಲಿತ ಸಾಹಿತಿಗಳು ದಲಿತರ ಅನುಭವ ಜೀವನ ಲೋಕವನ್ನು ಅನಾವರಣಗೊಳಿಸುತ್ತಿದ್ದರೂ, ಮುಗಿಯದ ಜೀವನ ದ್ರವ್ಯ ದಲಿತರ ಅನುಭವದಲ್ಲಿ ಅಡಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ರಿಯಾಯಿತಿ, ಔದಾರ್ಯ ಮತ್ತು ಪ್ರಾತಿನಿಧ್ಯವನ್ನು ಮೀರಿ ಪ್ರಶಂಸೆಗೆ, ಅಭಿಮಾನಕ್ಕೆ ಕಾರಣವಾಗುವಂತ ಸಾಹಿತ್ಯ ದಲಿತ ಬರಹಗಾರರಿಂದ ಮೂಡಿಬರುತ್ತಿದೆ. ಅದರಲ್ಲಿ ಮೊದಲ ಜೋಡು ಕೂಡ ಒಂದಾಗಿದೆ. ಒಂದು ಕಾಲಕ್ಕೆ ಜೋಡು ಇಲ್ಲದ ದಲಿತರು, ಬೂಟು ಹಾಕಿಕೊಳ್ಳುವ ಕಾಲಕ್ಕೆ ಬಂದು ನಿಂತಿದ್ದಾರೆ ಎಂಬ ಸಾಕೇತಿಕತೆಯನ್ನು ಒಂದು ಜೋಡು ಕಥೆಗಳು ಹೇಳುತ್ತದೆ. ಖಂಡಿತವಾಗಿಯೂ ಕಥೆಗಾರ ಮಧುಕರ ಮಳವಳ್ಳಿ ಇದರಲ್ಲಿ ಯಶಸ್ವಿಯಾಗಲಿದ್ದಾರೆ ಎಂದು ಹೇಳಿದರು.

ಈ ಭಾಗದ ಪವಾಡ ಪುರುಷರಾದ ಶ್ರೀಮಂಟೇಸ್ವಾಮಿ ಮತ್ತು ಮಲೆಮಹದೇಶ್ವರರು ಹೊರಗಿನಿಂದ ಬಂದು, ಈ ನೆಲದಲ್ಲಿ ನೆಲೆಗೊಂಡು ವಿಶಿಷ್ಟವಾದ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕವನ್ನು ಅನಾವರಣಗೊಳಿಸಿದ್ದಾರೆ. ಅಂತಹ ಗುಣ ಈ ಮಣ್ಣಿನಲ್ಲಿ ಅಡಗಿದೆ. ಮಳವಳ್ಳಿಯಿಂದ ಬಂದು ಚಾಮರಾಜನಗರದಲ್ಲಿ ನೆಲೆಸಿರುವ ಕಥೆಗಾರ ಮಧುಕರ ಈ ವಿಶಿಷ್ಟ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಕೆ.ವೆಂಕಟರಾಜು, ಜಾನಪದ ಕಲಾವಿದ ಸಿ.ಎಂ.ನರಸಿಂಹಮೂರ್ತಿ, ರೋಟರಿ ಸಂಸ್ಥೆ ಅಧ್ಯಕ್ಷ ಪಿ.ಚಂದ್ರಶೇಖರ್, ಕಾರ್ಯದರ್ಶಿ ಸಿದ್ದರಾಜು, ಸಾಹಿತ್ಯ ಅಕಾಡೆಮಿ ಸದಸ್ಯ ರವಿಕುಮಾರ್ ಭಾಗಿ, ಕಥೆಗಾರ ಮಧುಕರ್ ಮಳವಳ್ಳಿ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ವಿನಯ್, ಜಾನಪದ ಗಾಯಕ ಚಂಗಚಹಳ್ಳಿ ಕೃಷ್ಣಮೂರ್ತಿ, ಅಜಯ್ ಗುಂಬಳ್ಳಿ ಹಾಗೂ ಇತರರು ಹಾಜರಿದ್ದರು.

ಜಿಲ್ಲಾ ಉತ್ಸವವನ್ನು ಆಯೋಜಿಸಿ:

ಜಿಲ್ಲೆ ಅತ್ಯಂತ ಸಂಪದ್ಭರಿತವಾಗಿದ್ದು, ಜಾನಪದ ಕಲೆ, ಜಾನಪದ ಮಹಾಕಾವ್ಯಗಳು ಸಾಹಿತ್ಯ ಜಗತ್ತಿಗೆ ಅಪಾರವಾದ ಕೊಡುಗೆಯನ್ನು ನೀಡಿದೆ. ಜಿಲ್ಲೆಯಲ್ಲಿ ಹೆಚ್ಚಾಗಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಅರಣ್ಯವಾಸಿಗಳು ನೆಲೆಸಿದ್ದು, ಸಾಂಸ್ಕೃತಿಕ ಮುಂಚೂಣಿಯಲ್ಲಿ ಇದೆ. ಸಾಂಸ್ಕೃತಿಕ ಸತ್ವವನ್ನು, ಪಾರಂಪರಿಕ ಮಹತ್ವವನ್ನು ಹೊಂದಿರುವ, ಅನೇಕ ಪ್ರತಿಭಾವಂತರು ಇಲ್ಲಿ ಬರೆಯುತ್ತಿದ್ದಾರೆ. ಅಧ್ಯಯನಕಾರರು, ಹೋರಾಟಗಾರರು, ಜಾನಪದ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿದ್ದು, ರಾಜ್ಯ ಸರ್ಕಾರ ಹಂಪಿ, ಕಿತ್ತೂರು ಇನ್ನಿತರೆ ಉತ್ಸವದ ರೀತಿಯಲ್ಲಿ ಜಿಲ್ಲಾ ಉತ್ಸವವನ್ನು ವಾರ್ಷಿಕವಾಗಿ ಆಯೋಜಿಸಬೇಕು. ಎಂದು ಬಂಜಗೆರೆ ಜಯಪ್ರಕಾಶ್ ಒತ್ತಾಯಿಸಿದರು.