ಮದ್ದೂರು: ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದ ದಲಿತ ಯುವಕ ಜಯಕುಮಾರ್ ಸಾವಿನ ಪ್ರಕರಣವನ್ನು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿಸಬೇಕೆಂದು ಒತ್ತಾಯಿಸಿ ದಲಿತ ಹಕ್ಕುಗಳ ಸಮಿತಿಯಿಂದ ತಾಲೂಕು ಕಚೇರಿ ಎದರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಸಮಿತಿಯ ಜಿಲ್ಲಾಧ್ಯಕ್ಷ ಆರ್.ಕೃಷ್ಣ ಮಾತನಾಡಿ, ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದ ದಲಿತ ಯುವಕ ಜಯಕುಮಾರ್ ಎಂಬಾತನನ್ನು ಹುಲ್ಲಿನ ಮೆದೆಗೆ ದೂಡಿ ಸಜೀವವಾಗಿ ಸುಟ್ಟಿರುವ ಘಟನೆ ನಡೆದಿದೆ. ಇದು ಹಲವು ಗೊಂದಲಗಳಿಗೆ ಎಡೆ ಮಾಡಿಕೊಟ್ಟಿದೆ. ಆದ್ದರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಕುಟುಂಬಕ್ಕೆ 25 ಲಕ್ಷ ರೂ.ಪರಿಹಾರ ನೀಡಬೇಕು. ಆತನ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಬೇಕೆಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಸಣ್ಣ ವಿಚಾರಗಳಿಗೆ ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕುವುದು, ಜಾತಿ ನಿಂದನೆ ಮಾಡುವ ಘಟನೆಗಳು ನಡೆಯುತ್ತಿವೆ. ಮಂಡ್ಯ ತಾಲೂಕಿನ ಎಲೆಚಾಕನಹಳ್ಳಿ ಗ್ರಾಮದಲ್ಲಿ ದೇವಸ್ಥಾನದ ಪ್ರವೇಶ ವಿಚಾರವಾಗಿ ದಲಿತರಿಗೆ ಬಹಿಷ್ಕಾರ ಹಾಕಲಾಗಿದೆ. ಕೂಡಲೇ ಇದಕ್ಕೆ ಕಾರಣರಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಳಿಕ ತಹಸೀಲ್ದಾರ್ ಡಾ.ಸ್ಮಿತಾ ರಾಮು ಅವರಿಗೆ ಮನವಿ ಪತ್ರ ಸಲ್ಲಿಸಿದರು. ಸಮಿತಿಯ ರಾಜ್ಯ ಉಪಾಧ್ಯಕ್ಷ ಬಿ.ರಾಜಶೇಖರಮೂರ್ತಿ, ಸಹ ಕಾರ್ಯದರ್ಶಿ ಎಚ್.ಜಿ.ನಾಗಣ್ಣ, ಜಿಲ್ಲಾ ಕಾರ್ಯದರ್ಶಿ ಅಂಬೂಬೆ, ಖಜಾಂಚಿ ವಿಜೇಂದ್ರಕುಮಾರ್, ಜಿಲ್ಲಾ ಉಪಾಧ್ಯಕ್ಷ ಕೆ. ಎಸ್.ಶಿವಲಿಂಗಯ್ಯ, ಜಿಲ್ಲಾ ಸಹ ಕಾರ್ಯದಶಿ ಜಯರಾಮಯ್ಯ, ಮುಖಂಡರಾದ ಭಾನುಪ್ರಕಾಶ್, ಕುಮಾರ್, ಸಿದ್ದರಾಜು, ನಿಂಗರಾಜಮ್ಮ, ಕಮಲಮ್ಮ, ಲಕ್ಷ್ಮಮ್ಮ, ನಾಗಮ್ಮ, ಜಯಲಕ್ಷ್ಮೀ ಇದ್ದರು.