ಬಾಗಲಕೋಟೆಯಲ್ಲಿ ಭೋವಿ ಜಗದ್ಗುರು ಪೀಠದಿಂದ ಇತ್ತೀಚಿಗೆ ನಡೆದಿದ್ದ ಧಾರ್ಮಿಕ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಕಾರ್ಯಕರ್ತರಿಗಾಗಿ ಭಾನುವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಶ್ರೀಪೀಠದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿದರು. ಸಚಿವ ಸತೀಶ ಜಾರಕಿಹೊಳಿ, ಭೋವಿ ಸಮಾಜದ ಮುಖಂಡ ಸತೀಶ ಬಂಡಿವಡ್ಡರ, ಅಶೋಕ ಲಿಂಬಾವಳಿ ಮತ್ತಿತರರು ಚಿತ್ರದಲ್ಲಿ ಇದ್ದಾರೆ. 
ಜಿಲ್ಲೆ

ದಲಿತ ಸಿಎಂ ಹೊಸ ದಾಳ ಉರುಳಿಸಿದ ಬೋವಿ ಪೀಠದ ಜಗದ್ಗುರು !

ಬಾಗಲಕೋಟೆ: ರಾಜ್ಯದಲ್ಲಿ ಆಗಾಗ ದಲಿತ ಸಿಎಂ ವಿಚಾರ ಬಹು ಚರ್ಚಿತ. ಇತ್ತೀಚಿನ ದಿನಗಳಲ್ಲಿ ಡಾ.ಜಿ.ಪರಮೇಶ್ವರ ಹೆಸರು ಜೋರಾಗಿಯೇ ಕೇಳಿ ಬರುತ್ತಿರುವ ಬೆನ್ನಲ್ಲಿ ಇದೀಗ ಭೋವಿ ಜಗದ್ಗುರು ಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರು ದಲಿತ ಸಿಎಂಗೆ ಸತೀಶ ಜಾರಕಿಹೊಳಿ ಹೆಸರು ಉಲ್ಲೇಖಿಸಿದ್ದಾರೆ. ಅಲ್ಲದೇ ಇದು ಎಸ್ಸಿ, ಎಸ್ಟಿಯ ೧೭೦ ಸಮುದಾಯಗಳಲ್ಲಿ ವಿರೋಧ ಇಲ್ಲದೇ ಅವಿರೋಧ ಆಯ್ಕೆ ಎಂದು ಹೇಳುವ ಮೂಲಕ ಹೊಸ ದಾಳ ಉರುಳಿಸಿದ್ದಾರೆ.

ಬಾಗಲಕೋಟೆಯಲ್ಲಿ ಇರುವ ಬೋವಿ ಪೀಠದಿಂದ ಇತ್ತೀಚಿಗೆ ನಡೆದಿದ್ದ ಭೋವಿ ಸಮಾಜದ ಸಮ್ಮೇಳನ ಹಾಗೂ ಶ್ರೀಪೀಠದ ಕುಟೀರ ಉದ್ಘಾಟನೆ ಕಾರ್ಯಕ್ರಮಕ್ಕೆ ಶ್ರಮಿಸಿದ ಕಾರ್ಯಕರ್ತರಿಗೆ ಭಾನುವಾರ ಅಭಿನಂದನಾ ಸಭೆಯಲ್ಲಿ ಜಗದ್ಗುರುಗಳು ಮಾತನಾಡಿದರು.

ಅಂದಿನ ಕಾರ್ಯಕ್ರಮಕ್ಕೆ ಗೈರು ಉಳಿದಿದ್ದ ಸಚಿವ ಸತೀಶ ಜಾರಕಿಹೊಳಿ ಅವರು ಭಾನುವಾರ ಶ್ರೀಪೀಠಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ನಮ್ಮ ನಡುವೆ ಇರುವ ಜೀವಂತ ಅಂಬೇಡ್ಕರ ಎಂದರೆ ಅದು ಸತೀಶ ಜಾರಕಿಹೊಳಿ ಎಂದು ಬಣ್ಣಿಸಿದರು.

ದುವರೆದು ಎಸ್ಟಿ, ಎಸ್ಟಿ ಸೇರಿ ೧೭೦ ಸಮಾಜಗಳು ಇವೆ. ಅವರೆಲ್ಲರಲ್ಲೂ ಭವಿಷ್ಯದಲ್ಲಿ ತಮ್ಮ ಸಮುದಾಯಕ್ಕಿಂತ ಮೊದಲು ಜಾರಕಿಹೊಳಿ ಸಾಹೇಬ್ರು ಮುಖ್ಯಮಂತ್ರಿ ಆಗಬೇಕು ಎನ್ನುತ್ತಾರೆ. ಕಾರಣ ಜಾರಕಿಹೊಳಿಯವರು ನಿಜವಾಗಿ ನಾಯಕರನ್ನು ತಯಾರು ಮಾಡಿದ್ದಾರೆ. ನಿರ್ಮಾಣ ಮಾಡುವ ವೇದಿಕೆಯಲ್ಲಿ ಭಾಷಣ ಮಾಡುವುದು ಬೇರೆ, ಭಾಷಣ ಮಾಡುವ ಹಾಗೆ ವೇದಿಕೆ ಮಾಡುವುದು ಬೇರೆ. ಅಂತಹ ಸಾವಿರಾರು ಜನರನ್ನು ತಯಾರು ಮಾಡಿದ್ದು ಜಾರಕಿಹೊಳಿ ಅವರು. ಕೈಗಾರಿಕೆಗಳನ್ನು ತೆರೆದು ಸಾಕಷ್ಟು ಜನರಿಗೆ ಉದ್ಯೋಗ ನೀಡಿದ್ದಾರೆ. ಮೌಢ್ಯಗಳ ವಿರುದ್ಧ ಜನ ಜಾಗೃತಿ ಮೂಡಿಸುತ್ತಿದ್ದಾರೆ. ಭವಿಷ್ಯದಲ್ಲಿ ಅವರು ಸಿಎಂ ಆಗಬೇಕು ಎನ್ನುವುದು ಎಸ್ಸಿ, ಎಸ್ಟಿ ಎಲ್ಲ ಸಮುದಾಯಗಳ ಆಯ್ಕೆ ಎಂದು ಸ್ಪಷ್ಟವಾಗಿ ಹೇಳಿದರು.

ಈಗಾಗಲೇ ದಲಿತ ಸಿಎಂ ವಿಚಾರದಲ್ಲಿ ಅನೇಕ ಮುಖಂಡರು ಪೈಪೋಟಿ ನಡೆಸಿದ್ದಾರೆ. ಒಳಮೀಸಲಾತಿ ವಿಚಾರವಾಗಿ ವಿರೋಧ ಮಾಡುತ್ತಲೇ ಬಂದಿರುವ ಬೋವಿ ಪೀಠದ ಜಗದ್ಗುರುಗಳು ದಲಿತ ಸಿಎಂ ಎಂದರೆ ಅದು ಸತೀಶ ಜಾರಕಿಹೊಳಿ ಅವರೇ ಆಗಬೇಕು ಎನ್ನುವ ಇಂಗಿತ ಹೊರಹಾಕುವ ಮೂಲಕ ಸಿಎಂ ರೇಸ್ನ ದಲಿತ ಎಡಗೈ ಹಾಗೂ ಬಲಗೈ ಸಮುದಾಯದ ಆಕಾಂಕ್ಷಿಗಳು ಪರೋಕ್ಷ ಟಾಂಗ್ ಕೊಟ್ಟರಾ ಎನ್ನುವ ಪ್ರಶ್ನೆ ಮೂಡಿಸಿದೆ.