ಜಿಲ್ಲೆ

ದಲಿತ ಸಮುದಾಯಕ್ಕೆ ಎಚ್‌ಡಿಕೆ ಅಪಮಾನ: ಮೈಸೂರಿನಲ್ಲಿ ಪ್ರತಿಭಟನೆ

ಮೈಸೂರು: ದಲಿತ ಸಮುದಾಯಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಸ್ವಾಭಿಮಾನಿ ಕರ್ನಾಟಕ ದಲಿತ ಯುವಪಡೆ ವತಿಯಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.
ಪುರಭವನದ ಎದುರಿನ ಅಂಬೇಡ್ಕರ್ ಪ್ರತಿಮೆ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು, ಎಚ್.ಡಿ. ಕುಮಾರಸ್ವಾಮಿ ಮತ್ತು ಜೆಡಿಎಸ್ ವಿರುದ್ಧ ಘೋಷಣೆ ಕೂಗಿದರು.

ಚಿಕ್ಕಬಳ್ಳಾಪುರದಲ್ಲಿ ನಡೆದ ಪಂಚರತ್ನ ರಥಯಾತ್ರೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ‘ಸಿ.ಎಂ.ಇಬ್ರಾಹಿಂ ಮುಖ್ಯಮಂತ್ರಿಯಾಗಬಾರದೇಕೆ? ಆತನೇನು ಅಸ್ಪಶ್ಯನೇ? ಎಂದಿದ್ದಾರೆ. ಇದು ಅವರ ಜಾತೀಯತೆಯ ಮನಸ್ಥಿತಿಯನ್ನು ಅನಾವರಣಗೊಳಿಸಿದೆ ಎಂದು ಕಿಡಿಕಾರಿದರು.

ತಮ್ಮ ಪಕ್ಷವನ್ನು ಜಾತ್ಯತೀತ ಪಕ್ಷ ಎಂದು ಹೇಳಿಕೊಂಡು ವೇದಿಕೆಗಳಲ್ಲಿ ಪರಿಶಿಷ್ಟರ ಅಭಿವೃದ್ಧಿ ಬಗ್ಗೆ ಮಾತನಾಡುವ ಇವರು ಜಾತಿವಾದಿ ಮನಸ್ಥಿತಿಯುಳ್ಳವರು. ಇವರಿಂದ ದಲಿತರ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವೇ? ಅಸ್ಪಶ್ಯತೆ ಆಚರಣೆಯನ್ನು ಪ್ರೊತ್ಸಾಹಿಸಿಕೊಂಡು ಬರುತ್ತಿರುವ ಕೊಳಕು ಮನಸ್ಥಿತಿಯುಳ್ಳ ಇಂತವರ ಬಗ್ಗೆ ದಲಿತ ಸಮುದಾಯ ಎಚ್ಚರಿಕೆಯಿಂದ ಇರಬೇಕು ಎಂದು ದಸಂಸ ಜಿಲ್ಲಾ ಸಂಚಾಲಕ ಶಂಭುಲಿಂಗಸ್ವಾಮಿ ಹೇಳಿದರು.
2 ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕುಮಾರಸ್ವಾಮಿ ಅವರ ಬಾಯಲ್ಲಿ ಅಸ್ಪಶ್ಯರಿಗೆ ಅಧಿಕಾರ ದೊರಕಬಾರದು ಎಂಬ ಮನಸ್ಥಿತಿಯಲ್ಲಿ ಮಾತನಾಡಿದ್ದಾರೆ. ಇದನ್ನು ಗಮನಿಸಿದಾಗ ಇವರ ಬಾಹ್ಯ ವರ್ತನೆಗೂ, ಮಾನಸಿಕವಾಗಿ ಆಂತರಿಕ ನಿಲುವಿಗೂ ವ್ಯತ್ಯಾಸ ಇರುವುದು ಸ್ಪಷ್ಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಹೇಳಿಕೆಯನ್ನು ತಕ್ಷಣ ಹಿಂಪಡೆದು ದಲಿತ ಸಮುದಾಯದ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ದಸಂಸ ಮುಖಂಡರಾದ ಹಾರೋಹಳ್ಳಿ ನಟರಾಜ್, ಕಲ್ಲಹಳ್ಳಿ ಕುಮಾರ್, ಮರಿದೇವಯ್ಯ, ಬೋಗಾದಿ ಮಹದೇವಸ್ವಾಮಿ, ದೂರ ನಂದೀಶ್,ವಿಜಯಕುಮಾರ್ ಬಂಡೀಪಾಳ್ಯ, ಪಿ.ಮರಂಕಯ್ಯ, ಮಾರ್ಬಳ್ಳಿ ಮಹೇಶ್, ತಳೂರು ಕುಬೇರ್, ತಳೂರು ಪ್ರಸನ್ನ, ಮಂಡಕಳ್ಳಿ ಮಹೇಶ್, ಮಣಿಯಯ್ಯ ಇನ್ನಿತರರು ಭಾಗವಹಿಸಿದ್ದರು.