ಚಿತ್ರದುರ್ಗ: ಮೂಢನಂಬಿಕೆಗಳಿಗೆ ಮೊರೆ ಹೋಗದೆ ಶಿಕ್ಷಣಕ್ಕೆ ಆದ್ಯತೆ ನೀಡುವಂತೆ ಬಡಾವಣೆ ಠಾಣೆ ಪಿಐ ನಹೀಂ ಅಹಮ್ಮದ್ ದಲಿತ ಸಮುದಾಯಕ್ಕೆ ಸಲಹೆ ನೀಡಿದರು.
ಠಾಣೆಯಿಂದ ಅಂಬೇಡ್ಕರ್ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ದಲಿತ ಸಮುದಾಯದ ಸಭೆಯಲ್ಲಿ ಮಾತನಾಡಿ, ಮಕ್ಕಳ ಶಿಕ್ಷಣದೆಡೆ ವಿಶೇಷ ಗಮನ ಹರಿಸಬೇಕು. ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣವಾಗಲಿದೆ. ದೌರ್ಜನ್ಯ ನಡೆದರೆ ಕೂಡಲೇ ಪೊಲೀಸರಿಗೆ ತಿಳಿಸಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಗ್ಯಾರಂಟಿ ಯೋಜನೆಗಳ ಜಿಲ್ಲಾ ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ ಮಾತನಾಡಿ, ಯುವಜನರು ಶಿಕ್ಷಣದ ಜತೆಗೆ ಸಮಾಜಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳ ಬೇಕು. ಉತ್ತಮ ವ್ಯಕ್ತಿತ್ವ, ಶಿಸ್ತುಬದ್ಧ ಜೀವನಕ್ಕೆ ಅದ್ಯತೆ ನೀಡಬೇಕು. ಶಿಕ್ಷಣ ಪಡೆದರೆ ದಲಿತ ಸಮುದಾಯದ ಮೇಲೆ ದೌರ್ಜನ್ಯಗಳಾಗುವುದಿಲ್ಲ. ಪೊಲೀಸರು ಜನರದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಬಿಗಿ ಧೋರಣೆ ಅನುಸರಿಸುತ್ತಿರುವುದು ಶಾಂತಿ ವಾತಾವರಣಕ್ಕೆ ಕಾರಣವಾಗಿದೆ ಎಂದರು.
ಪಿಎಸ್‌ಐ ಟಿ.ರಘು ಕಾಯ್ದೆಗಳ ಕುರಿತು ಮಾಹಿತಿ ನೀಡಿದರು. ದಲಿತ ಮುಖಂಡ ರಾಜಣ್ಣ, ಕಣಿವೆ ಮಾರಮ್ಮ ಸಂಘದ ಅಧ್ಯಕ್ಷ ಬೆಳಗಟ್ಟ ತಿಪ್ಪೇಸ್ವಾಮಿ, ಗ್ರಾಪಂ ಸದಸ್ಯ ಮಂಜುನಾಥ್, ನಿವೃತ್ತ ಸಬ್‌ಇನ್‌ಸ್ಪೆಕ್ಟರ್ ಎಸ್.ಕಮಲಮ್ಮ ಮಾತನಾಡಿದರು. ಪತ್ರಕರ್ತ ಡಿ.ಎನ್.ಕೃಷ್ಣಮೂರ್ತಿ ಸ್ವಾಗತಿಸಿದರು.
---