ಜಿಲ್ಲೆ

ದಲಿತ ಸಂಘಟನೆಗಳ ಐಕ್ಯತಾ ಸಮಾವೇಶ 6ಕ್ಕೆ

reporterctd

ದಾವಣಗೆರೆ: ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಡಿ.6 ರಂದು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ದಲಿತರ ಸಾಂಸ್ಕೃತಿಕ ಪ್ರತಿರೋಧ ಮತ್ತು ದಲಿತ ಸಂಘಟನೆಗಳ ಐಕ್ಯತಾ ಸಮಾವೇಶ ನಡೆಯಲಿದೆ.

ಡಾ.ಬಿ.ಆರ್. ಅಂಬೇಡ್ಕರ್ ಅವರ 66ನೇ ಪರಿನಿಬ್ಬಾಣ ದಿನದ ಅಂಗವಾಗಿ ಸಮಾವೇಶ ಆಯೋಜನೆಯಾಗಿದೆ. ಛಿದ್ರವಾಗಿರುವ ಬಣಗಳನ್ನು ಒಂದುಗೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ.ಎ.ವಿ. ರಾಮಚಂದ್ರಪ್ಪ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಇತ್ತೀಚಿಗೆ ಸಂವಿಧಾನದ ಆಶಯಗಳು ಕುಸಿಯುತ್ತಿವೆ. ಸರ್ಕಾರಗಳು ಸುಳ್ಳುಗಳನ್ನೇ ಸಂಭ್ರಮಿಸುತ್ತಿವೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದ್ದು, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಸರ್ಕಾರ, ಗುರುಕುಲ ಶಿಕ್ಷಣ ಜಾರಿಗೆ ತರುವ ಹುನ್ನಾರ ಮಾಡುತ್ತಿದೆ. ದಲಿತರು, ಹಿಂದುಳಿದವರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ. ಹೀಗಾಗಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಬೇರೆ ಬೇರೆಯಾಗಿರುವ ದಲಿತ ಸಮಿತಿಗಳು ಐಕ್ಯತೆ ಅಡಿಯಲ್ಲಿ ಒಂದುಗೂಡಲಿವೆ ಎಂದು ತಿಳಿಸಿದರು. ಆರ್ಥಿಕ ದುರ್ಬಲ ವರ್ಗಗಳಿಗೆ (ಇಡಬ್ಲ್ಯುಎಸ್) ಶೇ.10ರಷ್ಟು ಮೀಸಲು ನೀಡುತ್ತಿರುವುದು ಸಂವಿಧಾನ ಹಾಗೂ ಸಾಮಾಜಿಕ ನ್ಯಾಯಕ್ಕೆ ವಿರೋಧವಾದುದು. ಕೇವಲ 4 ಜಾತಿಗಳಿಗೆ ಇದನ್ನು ಜಾರಿಗೊಳಿಸಲಾಗುತ್ತಿದೆ. ಈ ಜಾತಿಗಳು ಮೀಸಲು ಕೇಳಿಲ್ಲ. ಯಾವ ಆಯೋಗವೂ ವರದಿ ನೀಡಿಲ್ಲ. ಕೇವಲ ಶೇ 3ರಷ್ಟು ಇರುವ ಜನಕ್ಕೆ ಶೇ 10ರಷ್ಟು ಮೀಸಲು ನೀಡಲಾಗುತ್ತಿದೆ. ಇದರ ವಿರುದ್ಧ ದಲಿತಪರ ಸಂಘಟನೆಗಳು ದನಿ ಎತ್ತಲಿವೆ. ಜಿಲ್ಲೆಯಿಂದ 5 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ದಸಂಸ ಮುಖಂಡ ಹೆಗ್ಗೆರೆ ರಂಗಪ್ಪ ಮಾತನಾಡಿ ಸಮಾವೇಶವನ್ನು ಡಾ.ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗಳು ರಮಾಬಾಯಿ ಆನಂದ್ ತೇಲ್ತುಂಬ್ಡೆ ಉದ್ಘಾಟಿಸುವರು. ಮುಖಂಡರಾದ ಎನ್.ವೆಂಕಟೇಶ್, ಮಾವಳ್ಳಿ ಶಂಕರ್, ದೇವನೂರ ಮಹಾದೇವ, ಇಂಧೂದರ ಹೊನ್ನಾಪುರ ಸೇರಿ ಹಲವರು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕಬ್ಬಳ್ಳಿ ಮೈಲಾರಪ್ಪ, ಗುಮ್ಮನೂರು ರಾಮಚಂದ್ರಪ್ಪ, ಬೇತೂರು ಕುಮಾರ್, ಅಳಗವಾಡಿ ನಿಂಗರಾಜ್, ಮಂಜುನಾಥ್ ಇದ್ದರು.