ಚಾಮರಾಜನಗರ: ಪ್ರಸ್ತುತ ಸಂದರ್ಭದಲ್ಲಿ ಎಸ್ಸಿ, ಎಸ್ಟಿ ಸಮುದಾಯದವರ ಜಮೀನುಗಳಿಗೆ ಸಾಗುವಳಿ ನೀಡುವುದನ್ನು ನಿಲ್ಲಿಸಲಾಗಿದ್ದು, ದಲಿತರ ಜಮೀನುಗಳಿಗೆ ಸಾಗುವಳಿ ನೀಡಬೇಕು ಎಂದು ದಲಿತ ಮುಖಂಡರು ಒತ್ತಾಯಿಸಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಹಲವಾರು ದಲಿತ ಮುಖಂಡರು ಮಾತನಾಡಿ, ಚಾಮರಾಜನಗರ ತಾಲೂಕಿನ ವ್ಯಾಪ್ತಿಯಲ್ಲಿ ಮೇಲ್ವರ್ಗದ ಜನಪ್ರತಿನಿಧಿಗಳು ತಮ್ಮ ಸಮುದಾಯದವರಿಗೆ ಸಾಗುವಳಿ ನೀಡಿ, ಉತ್ತಮವಾದ ಜಮೀನು ದೊರೆಯುವಂತೆ ನೋಡಿಕೊಂಡಿದ್ದಾರೆ. ಆದರೇ ದಲಿತರಿಗೆ ಕಾಡಂಚಿನಲ್ಲಿ ಜಮೀನು ನೀಡುವ ಮೂಲಕ ಅನ್ಯಾಯ ಮಾಡಿದ್ದಾರೆ. ಪ್ರಸ್ತುತ ಆ ಜಮೀನುಗಳಿಗಾದರೂ ಸಾಗುವಳಿಯನ್ನು ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡ ಆರ್.ಮಹದೇವಯ್ಯ ಮಾತನಾಡಿ, ತಾಲೂಕಿನ ಎಚ್.ಡಿ.ಾರೆಸ್ಟ್ ವ್ಯಾಪ್ತಿಯ ಸರ್ವೇ ನಂ.3 ರಲ್ಲಿ ಆಲೂರು ಗ್ರಾಮದ 12 ಕುಟುಂಬಗಳಿಗೆ ಜಮೀನು ನೀಡಿಲಾಗಿದ್ದು, 1962-63 ರಲ್ಲೇಸಾಗುವಳಿಯನ್ನು ವಿತರಣೆ ಮಾಡಲಾಗಿರುತ್ತದೆ. ಪ್ರಸ್ತುತ ಭೂಮಿಯನ್ನು ತಮಿಳುನಾಡಿನ ಮೂಲದವರು ಒತ್ತುವರಿ ಮಾಡಿಕೊಂಡಿದ್ದು, ಇದನ್ನು ನಮಗೆ ಬಿಡಿಸಿಕೊಡಬೇಕು ಎಂದು ಮನವಿ ಮಾಡಿದರು.
ತಹಸೀಲ್ದಾರ್ ಗಿರಿಜಾ ಪ್ರತಿಕ್ರಿಯಿಸಿ, ಈ ಸಂಬಂಧ ಜಮೀನಿಗೆ ಹೋಗಿ ಪರಿಶೀಲನೆ ನಡೆಸಿದ್ದೇನೆ. 30 ದಿನಗಳ ಕಾಲಾವಕಾಶ ಕೊಡಿ, ನಿಮಗೆ ನ್ಯಾಯ ದೊರಕಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶ್ರೀಕಂಠರಾಜೇ ಅರಸ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ನಂಜುಂಡೇಗೌಡ, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸುಬ್ಬರಾಯ, ನಗರಸಭೆ ಪೌರಾಯುಕ್ತ ರಾಮದಾಸ್, ಪಟ್ಟಣ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ರಾಜೇಶ್ ಹಾಗೂ ಸಮುದಾಯದ ಮುಖಂಡರು ಹಾಜರಿದ್ದರು.
ಡಿಎಚ್‌ಓ ವಿರುದ್ಧ ಧರಣಿ:
ನಗರದ ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆಯ ನಿವಾಸಿಯಾಗಿದ್ದ ನೇತ್ರಾವತಿ ಅವರು ಗರ್ಭಿಣಿಯಾಗಿದ್ದಾಗ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬದಲ್ಲಿ ಒಬ್ಬರಿಗೆ ಹೊರಗುತ್ತಿಗೆ ಆಧಾರದಲ್ಲಿ ಉದ್ಯೋಗ ನೀಡುವಂತೆ ಕೋರಲಾಗಿತ್ತು. ಆದರೇ ನೇತ್ರಾವತಿ ಅವರ ತಮ್ಮನಿಗೆ ಕೊಳ್ಳೇಗಾಲದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಆತನ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ ನೀಡದೇ ಸ್ಕಾೃವೆಂಜರ್ ಉದ್ಯೋಗ ನೀಡಲಾಗಿದೆ ಎಂದು ಡಿಎಚ್‌ಓ ವಿರುದ್ಧ ದಲಿತ ಮುಖಂಡರು ಕೆಲಕಾಲ ಸಭೆಯಲ್ಲಿ ಧರಣಿ ನಡೆಸಿದರು. ತಹಸೀಲ್ದಾರ್ ಗಿರಿಜಾ ಪ್ರತಿಕ್ರಿಯಿಸಿ, ನಾನು ಡಿಎಚ್‌ಓ ಜತೆಯಲ್ಲಿ ಮಾತನಾಡಿದ್ದೇನೆ. ಆತನಿಗೆ ಡಿ ಗ್ರೊಪ್ ನೌಕರಿಯನ್ನು ನೀಡಲು ಕ್ರಮವಹಿಸಲಾಗುವುದು, ನಾನು ಇದರ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದ ಬಳಿಕ ಧರಣಿ ಹಿಂಪಡೆಯಲಾಯಿತು.
ಸದನದ ಸಾಗುವಳಿ ವಿಚಾರವೂ ಪ್ರಸ್ತಾಪ:
ದಲಿತರಿಗೆ ಸಾಗುವಳಿ ನೀಡುವ ವಿಚಾರದ ಕುರಿತು ದಲಿತ ಮುಖಂಡ ರಾಮಸಮುದ್ರ ಶ್ರೀಕಂಠ ಅವರು ಮಾತನಾಡುವ ಸಂದರ್ಭದಲ್ಲಿ, ಸದನದಲ್ಲಿ ಶಾಸಕ ಪುಟ್ಟರಂಗಶೆಟ್ಟಿ ಅವರು ಸಾಗುವಳಿ ವಿಚಾರವಾಗಿ ಮಾತನಾಡಿರುವ ಕುರಿತು ಸಭೆಯಲ್ಲಿ ಪ್ರಸ್ತಾಪ ಮಾಡಿದರು. ಹರದನಹಳ್ಳಿ ಾರೆಸ್ಟ್, ಎಚ್.ಡಿ.ಾರೆಸ್ಟ್, ಪುಣಜನೂರು ಾರೆಸ್ಟ್ ವ್ಯಾಪ್ತಿಯಲ್ಲಿ ದಲಿತರಿಗೆ ನೀಡಿರುವ ಜಮೀನನ್ನು ಇನ್ನಿತರೆ ಸಮುದಾಯದವರಿಗೆ ಸಾಗುವಳಿ ನೀಡಲಾಗಿದೆ. ಈ ಕಾರಣಕ್ಕೆ ಸದನದಲ್ಲೂ ಇದು ಚರ್ಚೆಯಾಗಿದೆ. ಅಧಿಕಾರಿಗಳು ಸುಳ್ಳು ಮಾಹಿತಿಗಳನ್ನು ಸೃಷ್ಟಿಸುವ ಮೂಲಕ ದಲಿತರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಸ್ಮಶಾನಕ್ಕೆ ಭಿಕ್ಷೆ ಬೇಡುವ ಪರಿಸ್ಥಿತಿ:
ಗಾಳಿಪುರ ಬಡಾವಣೆಯ ನಿವಾಸಿಗಳಿಗೆ ಕಲ್ಲುಬಂಡೆಗಳು ಇರುವ ಜಮೀನಿನನ್ನು ಸ್ಮಶಾನಕ್ಕೆ ನೀಡಲಾಗಿದ್ದು, ಪರಿಶಿಷ್ಟ ಜಾತಿ ಜನರು ಸ್ಮಶಾನಕ್ಕಾಗಿ ಭಿಕ್ಷೆ ಬೇಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಕೀಲ ಪ್ರಸನ್ನಕುಮಾರ್ ದೂರಿದರು. ಮುಖಂಡ ಚಾ.ಗು.ನಾಗರಾಜ್ ಮಾತನಾಡಿ, ನಗರದ ಆದಿಜಾಂಬವ ಬಡಾವಣೆ ನಿವಾಸಿಗಳಿಗೆ ಸರ್ವೇ ನಂ.726 ರಲ್ಲಿ ಸ್ಮಶಾನಕ್ಕೆ 20 ಗುಂಟೆ ಜಾಗವನ್ನು ನೀಡಿದ್ದು,ಮಳೆ ಬಂದರೆ ಮಣ್ಣು ಕೊಚ್ಚಕೊಂಡು ಹೋಗುತ್ತಿದೆ. 5 ವರ್ಷಗಳಿಂದಲೂ ಈ ಸಮಸ್ಯೆಯಾಗಿದೆ ಎಂದು ಹೇಳಿದರು. ಕಿಲಗೆರೆ ಗ್ರಾಮದ ಸ್ಮಶಾನದಲ್ಲಿ ಪರಿಶಿಷ್ಟ ವರ್ಗದ ಜನರಿಗೆ ಹೆಣ ಹೂಳಲು ಅವಕಾಶ ಕೊಡುತ್ತಿಲ್ಲ ಎಂದು ಚಾ.ಸಿ.ಸೋಮನಾಯಕ ದೂರಿದರು. ತಹಸೀಲ್ದಾರ್ ಗಿರಿಜಾ ಮತ್ತು ಪೌರಾಯುಕ್ತ ರಾಮದಾಸ್ ಪ್ರತಿಕ್ರಿಯಿಸಿ, ಈ ಸಂಬಂಧ ಸೂಕ್ತ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ನಮ್ಮ ಜಮೀನಿಗೆ ರಸ್ತೆ ಮಾಡಿಕೊಡುವಂತೆ ಸರ್ವೇ ಇಲಾಖೆಯವರಿಗೆ 4 ಬಾರಿ ನೋಟಿಸ್ ನೀಡಿದ್ದರೂ ಒಂದು ಬಾರಿಯೂ ಬಂದಿಲ್ಲ. ನಾವು ಹೆಣ್ಣು ಮಕ್ಕಳೆ ಇದ್ದು, ತುಂಬಾ ಸಮಸ್ಯೆಯಾಗುತ್ತಿದೆ. ತಹಸೀಲ್ದಾರ್ ಯಾವುದೇ ಕ್ರಮವಹಿಸಲಿಲ್ಲ ಎಂದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ.
-ಪ್ರಮಿಳಾ, ಶಿವಪುರ, ಚಾಮರಾಜನಗರ