ಚಿಂಚೋಳಿ: ದ್ವೇಷ ರಾಜಕಾರಣದಲ್ಲಿ ತೊಡಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ರೈತಪರ ಯೋಜನೆಗಳನ್ನು ಕೈಬಿಡುವ ಮೂಲಕ ದಲಿತ, ಕೃಷಿಕ, ಜನವಿರೋಧಿಯಾಗಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹರಿಹಾಯ್ದರು.
ಗ್ಯಾರಂಟಿ ಹೆಸರಲ್ಲಿ ಜನಸಾಮಾನ್ಯರಿಂದ ಹಗಲುದರೋಡೆ ನಡೆಸುತ್ತಿದೆ. ಈಗಾಗಲೇ ವಿದ್ಯುತ್ ಬಿಲ್, ವಾಹನ ತೆರಿಗೆ, ಆಸ್ತಿ ತೆರಿಗೆ ಹೆಚ್ಚಿಸಿ ಜನರ ರಕ್ತ ಹೀರುತ್ತಿದ್ದು, ಗುತ್ತಿಗೆದಾರರ ಬಿಲ್ ಪಾವತಿಸದೆ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ನೀಡದೆ ಶೇ.೮೦ ಭ್ರಷ್ಟಾಚಾರದ ಸರ್ಕಾರ ಇದಾಗಿದೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಬಿಜೆಪಿ ಅವಧಿಯಲ್ಲಿ ಕೈಗೆತ್ತಿಕೊಂಡ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆಗೊಳಿಸುತ್ತಿಲ್ಲ. ಈಗಾಗಲೇ ಐನಾಪುರ ಏತ ನೀರಾವರಿ ಯೋಜನೆ ಸಂಸದ ಡಾ.ಉಮೇಶ ಜಾಧವ್ ಹಾಗೂ ಶಾಸಕ ಡಾ.ಅವಿನಾಶ ಜಾಧವ್ ಶ್ರಮದಿಂದ ಮಂಜೂರಾಗಿದೆ. ಆದರೆ ಕಾಂಗ್ರೆಸ್ ಸರ್ಕಾರ ಅನುದಾನ ನೀಡಲು ಹಿಂದೇಟು ಹಾಕುತ್ತಿದೆ ಎಂದು ದೂರಿದರು.
ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು, ಬರಪೀಡಿತ ಕ್ಷೇತ್ರ ಘೋಷಣೆಗೆ ತಿಂಗಳು ವಿಳಂಬ ಮಾಡಿ ಇದೀಗ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿರುವುದು ಸರಿಯಲ್ಲ. ರಾಜ್ಯ ಸರ್ಕಾರದ ಬೊಕ್ಕಸದಿಂದ ಅನುದಾನ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.
ಸಚಿವ ಡಿ.ಸುಧಾಕರ್ ದಲಿತ ವಿರೋಧಿಯಾಗಿದ್ದು, ಕೂಡಲೇ ಸಂಪುಟದಿAದ ವಜಾಗೊಳಿಸುವಂತೆ ಮುಖ್ಯಮಂತ್ರಿಯವರನ್ನು ಆಗ್ರಹಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶ್ವವೇ ಮೆಚ್ಚಿದೆ. ಆದರೆ ಇಂಡಿಯನ್ ಒಕ್ಕೂಟ ಪಕ್ಷಗಳು ವಿರೋಧಿಸುತ್ತಿದ್ದು, ಇದೀಗ ದೇಶದಲ್ಲಿ ಸನಾತನ ಧರ್ಮ ವಿನಾಶವೇ ನಮ್ಮ ಮೂಲ ಮಂತ್ರ ಎಂದು ಹೇಳುತ್ತಿರುವುದು ಜನತೆಗೆ ಮಾಡುತ್ತಿರುವ ಘೋರ ಅವಮಾನ. ಇದಕ್ಕೆ ಮತದಾರರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಗುಡುಗಿದರು.
ಪ್ರಮುಖರಾದ ಅಶೋಕ ಪಾಟೀಲ್, ಮೋತಿರಾಮ ನಾಯಕ, ಗೌತಮ ಪಾಟೀಲ್, ಸಂತೋಷ ಗಡಂತಿ, ಗೋಪಾಲರಾವ ಕಟ್ಟಿಮನಿ, ಸುಂದರ ಡಿ.ಸಾಗರ ಇತರರಿದ್ದರು.