ಜಿಲ್ಲೆ

ದಲಿತ ಮಹಿಳೆಯ ಭೂಮಿ ಕಬಳಿಸಲು ಹುನ್ನಾರ

ಹುಣಸೂರು: ಎಚ್.ಡಿ.ಕೋಟೆ ತಾಲೂಕಿನ ಪಡುಕೋಟೆ ಕಾವಲ್ ಗ್ರಾಮದ ದಲಿತ ಮಹಿಳೆ ಪೂವಮ್ಮ ಬಂಗಾರು ಅನುಭವದಲ್ಲಿರುವ ಭೂಮಿಯನ್ನು ಕಬಳಿಸಲು ಲಿಕ್ಕರ್ ಮಾಫಿಯಾದವರು ಪ್ರಯತ್ನಿಸುತ್ತಿದ್ದಾರೆ. ಅಧಿಕಾರಿಗಳು ದಲಿತ ಮಹಿಳೆಯ ರಕ್ಷಣೆಗೆ ಬರಬೇಕೆಂದು ಅನುಸೂಚಿತ ಜಾತಿ ಮತ್ತು ಅನುಸೂಚಿತ ವರ್ಗಗಳ ದೌರ್ಜನ್ಯ ಪ್ರತಿಬಂಧಕ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ನಿಂಗರಾಜ ಮಲ್ಲಾಡಿ ಆಗ್ರಹಿಸಿದರು.

ನಗರದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಎಸ್ಸಿ, ಎಸ್ಟಿ ದೌರ್ಜನ್ಯ ಪ್ರತಿಬಂಧಕ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, 40 ವರ್ಷಗಳಿಂದ ಪೂವಮ್ಮ ಸರ್ವೇ ನಂ.1ರಲ್ಲಿ 4.28 ಎಕರೆ ಭೂಮಿಯಲ್ಲಿ ಉಳುಮೆ ಮಾಡುತ್ತಿದ್ದು, ಈ ಭೂಮಿಯ ಮೇಲೆ ಲಿಕ್ಕರ್ ಉದ್ಯಮಿಗಳ ಕಣ್ಣುಬಿದ್ದಿದೆ. ತನ್ನ ಬಳಿ ಅಗತ್ಯ ದಾಖಲೆಗಳನ್ನು ಪೂವಮ್ಮ ಹೊಂದಿದ್ದರೂ ನ್ಯಾಯಾಲಯದ ಮೆಟ್ಟಿಲೇರಿರುವ ಲಿಕ್ಕರ್ ಉದ್ಯಮಿಗಳು ಬಡಮಹಿಳೆಗೆ ತೊಂದರೆ ಕೊಡುತ್ತಿದ್ದಾರೆ. ಅಧಿಕಾರಿಗಳು ಸರ್ವೇ ಕಾರ್ಯ ನಡೆಸಿರುವುದು ಸರಿ. ಈ ನಡುವೆ ಉದ್ಯಮಿಗಳ ಪರವಾಗಿ ಕೆಲ ದಲಿತ ಮುಖಂಡರೇ ಓಡಾಡುತ್ತಿರುವುದು ಗಮನಕ್ಕೆ ಬಂದಿದೆ. ಅಂತಹವರು ದಲಿತಪರ ವ್ಯಕ್ತಿಗಳಲ್ಲ. ಅಂತಹವರ ಮಧ್ಯ ಪ್ರವೇಶದಿಂದ ಅಧಿಕಾರಿಗಳು ಮೌನಕ್ಕೆ ಶರಣಾಗುವಂತಾಗಿದೆ. ಆದರೆ, ಅವರನ್ನು ಮುಂದುವರಿಯಲು ಬಿಟ್ಟರೆ ಸಮಾಜದಲ್ಲಿ ಅಶಾಂತಿ, ಅನ್ಯಾಯಗಳೇ ಹೆಚ್ಚಾಗಲಿವೆ. ಅಂತಹವರನ್ನು ಆಡಳಿತ ಸದೆಬಡಿಯಬೇಕೆಂದು ಒತ್ತಾಯಿಸಿದರು.

ಉಪವಿಭಾಗಾಧಿಕಾರಿ ಎಚ್.ಬಿ.ವಿಜಯಕುಮಾರ್ ಮಾತನಾಡಿ, ತಾಲೂಕು ಆಡಳಿತ ಎಲ್ಲರ ಸಮ್ಮುಖದಲ್ಲಿ ಸರ್ವೇ ಕಾರ್ಯ ನಡೆಸಿದೆ. ಇಬ್ಬರೂ ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ನ್ಯಾಯಾಲಯದ ತೀರ್ಪು ಬರುವವರೆಗೂ ಕಾಯೋಣ ಎಂದರು.

ಹುಣಸೂರು ತಾಲೂಕಿನ ಗೋವಿಂದನಹಳ್ಳಿ ಗ್ರಾಪಂ ವ್ಯಾಪ್ತಿಯ ಬಾಚಹಳ್ಳಿ ರಸ್ತೆಯ ಪರಿಶಿಷ್ಟ ಪಂಗಡದ ಸೋಲಿಗ ಸಮಾಜದ 13 ಕುಟುಂಬಗಳಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಪೌಷ್ಟಿಕ ಆಹಾರ ಸೌಲಭ್ಯಗಳನ್ನು ನೀಡಲು ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಇಂದಿಗೂ ಸೌಲಭ್ಯ ಸಿಗುತ್ತಿಲ್ಲವೆಂದು ನಿಂಗರಾಜ ಮಲ್ಲಾಡಿ ಬೇಸರಿಸಿದರು. ಈ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ರವಾನಿಸಲಾಗಿದೆ ಎಂದು ಇಲಾಖೆ ಅಧಿಕಾರಿ ತಿಳಿಸಿದಾಗ ಫಾಲೋ ಅಪ್ ಮಾಡಿ ಬೇಗ ಸೌಲಭ್ಯ ಕಲ್ಪಿಸಿ ಎಂದು ಉಪವಿಭಾಗಾಧಿಕಾರಿ ಸೂಚಿಸಿದರು.

10 ಸಭೆಗಳಲ್ಲಿ ಪ್ರಸ್ತಾಪಿಸಿದ್ದೇನೆ:

ಹುಣಸೂರು ತಾಲುಕಿನ ಬಿಳಿಗೆರೆ ಗ್ರಾಮದಲ್ಲಿ 65 ಪರಿಶಿಷ್ಟ ಜಾತಿಯ ಕುಟುಂಬಗಳ ಪೈಕಿ 56 ಕುಟುಂಬಕ್ಕೆ ಮನೆ ನಿವೇಶನದ ಹಕ್ಕುಪತ್ರ ನೀಡಲಾಗಿದೆ. ಉಳಿದ 9ರ ಪೈಕಿ 5 ಕುಟುಂಬಗಳಿಗೆ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ ನೀಡಲು ಕ್ರಮವಹಿಸಲಾಗಿದೆ ಎಂದು ತಾಪಂ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಇಂದಿಗೂ ಹಕ್ಕುಪತ್ರ ನೀಡುತ್ತಿಲ್ಲ. ಇಂತಹ 10 ಸಭೆಗಳಲ್ಲಿ ಇದನ್ನು ಪ್ರಸ್ತಾಪಿಸಿದ್ದೇನೆ. ಸಮಸ್ಯೆ ಪರಿಹಾರವಾಗುತ್ತಿಲ್ಲ ಏಕೆ ಎಂದು ಪ್ರಶ್ನಿಸಿದ ನಿಂಗರಾಜ ಮಲ್ಲಾಡಿ, ಫೈಲ್ ಬೆಂಗಳೂರಿಗೆ ಹೋಗಿದೆ ಎಂದರೆ ರೆಡಿ ಮಾಡಿಸಿಕೊಂಡು ನಾನು ಬರಲು ಸಾಧ್ಯವೇ? ನೀವೇತಾನೆ ಮಾಡಬೇಕು. ಎಷ್ಟು ಬಾರಿ ಕೇಳಬೇಕು ಎಂದು ಅಧಿಕಾರಿ ರಾಜೇಶ್‌ರನ್ನು ಪ್ರಶ್ನಿಸಿದರು. ಮಧ್ಯೆ ಪ್ರವೇಶಿಸಿದ ಉಪವಿಭಾಗಾಧಿಕಾರಿ ಹಿರಿಯ ಅಧಿಕಾರಿಗಳನ್ನು ಕಂಡು ಹಕ್ಕುಪತ್ರ ನೀಡಲು ಅಗತ್ಯ ಎಲ್ಲ ಪ್ರಕ್ರಿಯೆಗಳನ್ನು ಸಂಪೂರ್ಣಗೊಳಿಸಿ ಶೀಘ್ರ ಹಕ್ಕುಪತ್ರ ವಿತರಿಸಲು ಕ್ರಮವಹಿಸಿ ಎಂದು ಅಧಿಕಾರಿಗೆ ಸೂಚಿಸಿದರು.

ಸಭೆಯಲ್ಲಿ ಸಮಿತಿ ಸದಸ್ಯರಾದ ಹೊಸೂರು ಕುಮಾರ್, ಕ್ಯಾತನಹಳ್ಳಿ ನಾಗರಾಜು, ಡಿವೈಎಸ್‌ಪಿ ಗೋಪಾಲಕೃಷ್ಣ, ತಹಸೀಲ್ದಾರ್ ಜೆ.ಮಂಜುನಾಥ್, ಶ್ರೀನಿವಾಸ್, ಮೋಹನಕುಮಾರಿ, ಸಮಾಜ ಕಲ್ಯಾಣಾಧಿಕಾರಿ ಅಶೋಕ್‌ಕುಮಾರ್ ಹಾಜರಿದ್ದರು.