ಜಿಲ್ಲೆ

ದಲಿತ ನಾಯಕರಿಂದ ಮೀಸಲಾತಿ ದುರುಪಯೋಗ: ಕೆ.ಎಸ್.ಈಶ್ವರಪ್ಪ ಟೀಕೆ

ಮೈಸೂರು: ಬಹುತೇಕ ದಲಿತ ನಾಯಕರು ಮೀಸಲಾತಿ ದುರುಪಯೋಗ ಮಾಡಿಕೊಳ್ಳುತ್ತಿದ್ದು, ಅದು ನಿಲ್ಲಬೇಕು ಎಂದು ಶಾಸಕ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಹಿಂದುಳಿದ, ಕಡು ಬಡವರಾಗಿರುವ ದಲಿತರಿಗೆ ಅವಕಾಶ ದೊರೆಯಬೇಕು ಎನ್ನುವ ಉದ್ದೇಶದಿಂದ ಮೀಸಲಾತಿ ಜಾರಿಗೊಳಿಸಲಾಯಿತು. ಆದರೆ ಆರ್ಥಿಕವಾಗಿ ಪ್ರಬಲವಾಗಿರುವ ದಲಿತ ನಾಯಕರು ಮೀಸಲಾತಿಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದು, ಅವರ ಮಕ್ಕಳು, ಮೊಮ್ಮೊಕ್ಕಳಿಗೂ ಮೀಸಲಾತಿ ಪಡೆಯುತ್ತಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ಆರ್ಥಿಕವಾಗಿ ಪ್ರಬಲವಾಗಿರುವ ಮಲ್ಲಿಕಾರ್ಜುನ ಖರ್ಗೆ ಅಂಥವರು ಹಿಂದಿನಿಂದಲೂ ಮೀಸಲಾತಿ ಪಡೆದುಕೊಳ್ಳುತ್ತ ಬಂದಿದ್ದಾರೆ. ಈಗ ಅವರ ಮಗನೂ ಮೀಸಲಾತಿ ಅನುಭವಿಸುತ್ತಿದ್ದು, ಮೊಮ್ಮೊಕ್ಕಳ ಕಾಲಕ್ಕೂ ಮುಂದುವರಿದಿದೆ. ಇಂತಹ ಪರಿಸ್ಥಿತಿ ಎಲ್ಲ ಪಕ್ಷದಲ್ಲಿಯೂ ಇದೆ. ಬಹುತೇಕ ಇಂತಹ ದಲಿತ ನಾಯಕರು ಮೀಸಲಾತಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ನಿಜವಾದ ಕಡು ಬಡವರು, ಆರ್ಥಿಕವಾಗಿ ಹಿಂದುಳಿದ ದಲಿತರು ಅವಕಾಶ ವಂಚಿತರಾಗುತ್ತಿದ್ದಾರೆ ಎಂದರು.
ಹಿಂದುಳಿದ ವರ್ಗದವನಾದ ನಾನು ಯಾವುದೇ ಮೀಸಲಾತಿ ಪಡೆಯದೆ, ಸಾಮಾನ್ಯ ವರ್ಗದಿಂದ ಗೆದ್ದು ಬಂದಿದ್ದೇನೆ. ಪಕ್ಷ ಒಂದು ವೇಳೆ ನನಗೆ ಟಿಕೆಟ್ ನೀಡುವ ಅಧಿಕಾರ ಕೊಟ್ಟರೆ, ಮೀಸಲಾತಿ ಪಡೆದು ಸಬಲರಾಗಿರುವ ನಾಯಕರಿಗೆ ಟಿಕೆಟ್ ರದ್ದು ಮಾಡಿ ಅರ್ಹರಿಗೆ ಕೊಡುತ್ತೇನೆ ಎಂದು ಹೇಳಿದರು.
ಕೇಂದ್ರದ ತೀರ್ಮಾನ ಸ್ವಾಗತಾರ್ಹ:
ಬೆಟ್ಟದ ಕುರುಬ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವ ಕೇಂದ್ರ ಸರ್ಕಾರದ ತೀರ್ಮಾನ ಸ್ವಾಗತಾರ್ಹವಾಗಿದ್ದು, ಮೂರು ದಶಕಗಳ ಹೋರಾಟ ಇದಾಗಿದೆ. ಇದರಿಂದ ಗಡಿಭಾಗದ ಬಡವರಿಗೆ ಅನುಕೂಲವಾಗಲಿದ್ದು, ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇನ್ನು ಕುಲಶಾಸ್ತ್ರ ಅಧ್ಯಯನ ಮುಂದುವರಿದಿದೆ. ಅದರಲ್ಲಿ ಬರುವ ವರದಿ ಆಧರಿಸಿ ಆರ್ಥಿಕವಾಗಿ ಪ್ರಬಲವಾಗಿರುವ ಎಲ್ಲ ವರ್ಗದವರಿಗೆ ಮೀಸಲಾತಿ ನಿಲ್ಲಿಸಿ, ಬಡವರಿಗೆ ಮೀಸಲು ದೊರೆಯುವಂತೆ ಮಾಡಬೇಕು ಎಂದು ಈಶ್ವರಪ್ಪ ಹೇಳಿದರು.
ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಜಯ:
ಹಿಂದುಳಿದ, ದಲಿತ, ಬಡವರಿಗೆ ಆಸೆ, ಆಮಿಷ ತೋರಿಸಿ ಮತಾಂತರ ಮಾಡಲಾಗುತ್ತಿದೆ. ದೇಶದ ವೋಟಿಂಗ್ ಸಮೀಕ್ಷೆಯಲ್ಲಿ ಮತಾಂತರವಾಗುತ್ತಿರುವುದು ಗೊತ್ತಾಗುತ್ತಿದೆ. ಮತಾಂತರ ತಡೆ ವಿಧೇಯಕ ಅಂಗೀಕಾರವಾಗಿರುವುದು ಇತಿಹಾಸ ಸೃಷ್ಟಿ ಮಾಡಿದಂತೆ. ಈ ಮೂಲಕ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಜಯ ಸಿಕ್ಕಂತಾಗಿದೆ ಎಂದು ಈಶ್ವರಪ್ಪ ಅಭಿಪ್ರಾಯಪಟ್ಟರು.
ಜನರ ಹಿತಕ್ಕಿಂತ ಸ್ವಹಿತವೇ ಮುಖ್ಯ:
ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ಸಂತೃಪ್ತಿಪಡಿಸಲು ಮತಾಂತರ ನಿಷೇಧ ವಸೂದೆಯ ಪ್ರತಿಯನ್ನು ಹರಿದು ಹಾಕಿ ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡಿದ್ದಾರೆ. ಅವರಿಗೆ ಜನರ ಹಿತಕ್ಕಿಂತ ಸ್ವಹಿತವೇ ಮುಖ್ಯವಾಗಿದೆ ಎಂದು ಈಶ್ವರಪ್ಪ ಟೀಕಿಸಿದರು.ನೋಟಿಸ್‌ಗೆ ಆಕ್ಷೇಪ ಸರಿಯಲ್ಲ:
ಸಾರ್ವಜನಿಕ ದಾಖಲೆಗಳನ್ನು ಯಾವಾಗ ಬೇಕಾದರೂ ಪರಿಶೀಲಿಸಬಹುದು. ಇವರ ಕಾಲದಲ್ಲಿ ಅವ್ಯವಹಾರ ಆಗಿದ್ದರೆ ಅದನ್ನು ಪ್ರಶ್ನೆ ಮಾಡಬಾರದಾ? ಅಧಿಕಾರಿಗಳನ್ನು ದಾಖಲೆ ನೀಡಿ ಎಂದು ಕೇಳಿದರೆ ಇವರಿಗೇಕೆ ಭಯ? ಯಾರ ಮೇಲೂ ಒತ್ತಡ ಹಾಕಿ ಕಡತ ಪಡೆಯಬೇಕಾದ ಅವಶ್ಯಕತೆ ಇಲ್ಲ. ಡಿಕೆಶಿ ಏನೂ ತಪ್ಪು ಮಾಡಿಲ್ಲ ಎಂದಾದರೆ ಈ ಬಗ್ಗೆ ಯಾಕೆ ಮಾತಾಡಬೇಕು ಎಂದು ಈಶ್ವರಪ್ಪ ಪ್ರಶ್ನಿಸಿದರು.