ಚಿಕ್ಕಮಗಳೂರು ಡಿಸಿ ಕಚೇರಿ ಶಿರಸ್ತೇದಾರ್ ಹೇಮಂತ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ ಡಿಎಸ್‌ಎಸ್ ಕಾರ್ಯಕರ್ತರು ದಲಿತ ಕುಟುಂಬಗಳಿಗೆ ಜಮೀನು ಮಂಜೂರಾತಿ ಆಗ್ರಹಿಸಿದರು. ಮರ್ಲೆ ಅಣ್ಣಯ್ಯ, ಮಂಜಯ್ಯ ಮತ್ತಿತರರಿದ್ದರು. 
ಜಿಲ್ಲೆ

ದಲಿತ ಕುಟುಂಬಗಳಿಗೆ ಜಮೀನು ಮಂಜೂರಾತಿಗಾಗಿ ಮನವಿ

ಚಿಕ್ಕಮಗಳೂರು: ದಲಿತ ಕುಟುಂಬಗಳಿಗೆ ಜಮೀನು ಮಂಜೂರಾತಿ ಆಗ್ರಹಿಸಿ ಡಿಎಸ್‌ಎಸ್ ನೇತೃತ್ವದಲ್ಲಿ ಗ್ರಾಮಸ್ಥರು ಶಿರಸ್ತೇದಾರ್ ಹೇಮಂತ್‌ಕುಮಾರ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಡಿಎಸ್‌ಎಸ್ ರಾಜ್ಯ ಸಮಿತಿ ಸದಸ್ಯ ಮರ್ಲೆ ಅಣ್ಣಯ್ಯ, ಆಲ್ದೂರು ಹೋಬಳಿ ಸತ್ತಿಹಳ್ಳಿ ಗ್ರಾಮದ ೨೧ ದಲಿತ ಕುಟುಂಬಗಳಿಗೆ ಸರ್ವೆ ನಂ.೧೬೨ರಲ್ಲಿ ೧೯೮೪-೮೫ರಲ್ಲಿ ತಲಾ ನಾಲ್ಕು ಎಕರೆ ಜಮೀನು ಮಂಜೂರಾಗಿ ಜಿಲ್ಲಾಧಿಕಾರಿಗಳಿಂದ ಮುಂದಿನ ಕಡತಕ್ಕಾಗಿ ತಾಲೂಕು ಕಚೇರಿಗೆ ಆದೇಶ ಮಾಡಲಾಗಿತ್ತು ಎಂದರು.

ಪ್ರಸ್ತುತ ತಾಲೂಕು ಕಚೇರಿಯಿಂದ ಯಾವುದೇ ಕಡತ ತಯಾರಾಗದೇ ಇದುವರೆಗೂ ಅಲೆದಾಡಿಸುವ ಮೂಲಕ ದಲಿತ ಕುಟುಂಬಗಳಿಗೆ ಅನ್ಯಾಯ ಮಾಡಲಾಗುತ್ತಿದೆ. ಹೀಗಾಗಿ ತುರ್ತಾಗಿ ಆದೇಶ ಹೊರಡಿಸಿ ಸಂಬAಧಪಟ್ಟ ದಲಿತರಿಗೆ ಜಮೀನು ಮಂಜೂರು ಮಾಡಿಸಿ ಸಾಗುವಳಿ ಚೀಟಿ ಕೊಡಬೇಕು ಎಂದು ಒತ್ತಾಯಿಸಿದರು.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಡಿಎಸ್‌ಎಸ್ ಜಿಲ್ಲಾ ಪ್ರಧಾನ ಸಂಚಾಲಕ ಮಂಜಯ್ಯ ಮತ್ತು ಸತ್ತಿಹಳ್ಳಿ ಗ್ರಾಮಸ್ಥರಿದ್ದರು.