ಜಿಲ್ಲೆ

ದರ್ಶನ್ ಸೆಲ್ಗೆ ಟಿವಿ ಅಳವಡಿಕೆ

ಬಳ್ಳಾರಿ: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣ ಆರೋಪಿ ನಟ ದರ್ಶನ್‌ಗೆ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ನ ಹೈ ಸೆಕ್ಯೂರಿಟಿ ಸೆಲ್‌ಗೆ ಟಿವಿ ಅಳವಡಿಸಲಾಗಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದರು.ದರ್ಶನ್ ಕಳೆದ ಕೆಲ ದಿನಗಳಿಂದ ಟಿವಿ ನೀಡುವಂತೆ ಬೇಡಿಕೆಯಿಟ್ಟಿದ್ದರು. ಆದರೆ, ಕೆಲ ಕಾರಣಗಳಿಂದ ಟಿವಿ ನೀಡಲು ಜೈಲು ಸಿಬ್ಬಂದಿ ನಿರಾಕರಿಸಿದ್ದರು. ಮಂಗಳವಾರ ನಡೆದ ನ್ಯಾಯಾಲಯದಲ್ಲಿ ದರ್ಶನ್ ಪರ ವಕೀಲರು ಟಿವಿ ನೀಡುವಂತೆ ವಾದ ಮಂಡಿಸಿದ್ದರು. ಇದರ ಹಿನ್ನೆಲೆ ನ್ಯಾಯಾಲಯ ಆದೇಶದಂತೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಆದರೆ, ಯಾವುದೇ ಸುದ್ದಿ ವಾಹಿನಿಗಳು ವೀಕ್ಷಿಸಲು ಅವಕಾಶವಿಲ್ಲ, ದೂರದರ್ಶನ ವಾಹಿನಿ(ಡಿಡಿ)ಚಾನೆಲ್‌ಗೆ ಮಾತ್ರ ಅನುಮತಿ ನೀಡಲಾಗಿದೆ. ಅಲ್ಲದೆ, ಹಾಸಿಗೆ ಹಾಗೂ ತಲೆ ದಿಂಬು ನೀಡುವಂತೆ ಈಗಾಗಲೇ ಅಧಿಕಾರಿಗಳ ಬಳಿ ದರ್ಶನ್ ಮನವಿ ಮಾಡಿದ್ದಾರೆ. ನ್ಯಾಯಾಲಯದ ಆದೇಶ ಬಂದರೆ, ಹಾಸಿಗೆ ಹಾಗೂ ದಿಂಬು ನೀಡಲಾಗುವುದು ಎಂದು ಜೈಲು ಅಧೀಕ್ಷಕಿ ಲತಾ ತಿಳಿಸಿದರು. ಜೈಲಿನ ನಿಯಮದಂತೆ ಕೈದಿಗಳ ಕುಟುಂಬ, ಸಂಬಂಧಿಕರು ಹಾಗೂ ಅಪ್ತರಿಗೆ ವಾರದಲ್ಲಿ ಎರಡು ಬಾರಿ ಭೇಟಿ ನೀಡಲು ಅವಕಾಶವಿದೆ. ದರ್ಶನ್ ಭೇಟಿಗೆ ಆರಂಭದಲ್ಲಿ ಕೇವಲ ರಕ್ತ ಸಂಬಂಧಿಕರಿಗೆ ಮಾತ್ರ ಅವಕಾಶವಿತ್ತು. ಕೋರ್ಟ ಆದೇಶದಂತೆ ಕುಟುಂಬ, ಸಂಬಂಧಿಕರು ಹಾಗೂ ಗೆಳೆಯರ ಭೇಟಿಗೆ ಅವಕಾಶ ನೀಡಿದೆ. ಮುಂದಿನ ದಿನಗಳಲ್ಲಿ ಯಾರೆಲ್ಲ ಭೇಟಿ ನೀಡಲಿದ್ದಾರೆ ಎಂಬುದು ಕಾದು ನೋಡಬೇಕಿದೆ.