ಜಿಲ್ಲೆ

ದರ್ಶನ್ ಭೇಟಿ ಮಾಡಿದ ಪತ್ನಿ ವಿಜಯಲಕ್ಷ್ಮಿ

ಬಳ್ಳಾರಿ : ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಭೇಟಿ ಮಾಡಲು ಇಲ್ಲಿನ ಕೇಂದ್ರ ಕಾರಾಗೃಹಕ್ಕೆ ಪತ್ನಿ ವಿಜಯಲಕ್ಷ್ಮೀ, ಸಹೋದರ ದಿನಕರ್, ನಟ ಧನ್ವೀರ್ ಹಾಗೂ ಸಂಬಂಧಿ ಸುಶಾಂತ ನಾಯ್ಡು ಆಗಮಿಸಿದ್ದರು.
ನಗರದಲ್ಲಿ ಸಂಜೆ ವೇಳೆ ಸುರಿಯುತ್ತಿದ್ದ ಜಿನಿ ಜಿನಿ ಮಳೆಯಲ್ಲಿ ಡ್ರೈ ಫ್ರೂಟ್ಸ್, ತಿಂಡಿ ತಿನಿಸು ಹಾಗೂ ಬಟ್ಟೆಗಳು ಸೇರಿದ ಎರಡು ಬ್ಯಾಗ್‌ಗಳ ಸಮೇತ ಪತ್ನಿ ವಿಜಯಲಕ್ಷ್ಮೀ ಜೈಲಿಗೆ ಆಗಮಿಸಿದರು. ಜೈಲು ಸಿಬ್ಬಂದಿ ಬ್ಯಾಗ್‌ಗಳನ್ನು ನಾಲ್ವರನ್ನು ಪರಿಶೀಲಿಸಿ ದರ್ಶನ್ ವೀಕ್ಷಿಸಲು ಅನುಮತಿ ನೀಡಿದರು. ಬಳಿಕ ಹೈ ಸೆಕ್ಯೂರಿಟಿ ಸೆಲ್‌ನಿಂದ ದರ್ಶನ್ ಕರೆ ತರಲಾಯಿತು. ಬ್ಲಾಕ್ ಟಿ ಶರ್ಟ್ ಧರಿಸಿ ಜಿನಿ ಜಿನಿ ಮಳೆಯಲ್ಲಿಯೇ ಮುಖದಲ್ಲಿ ಉತ್ಸಾಹದಿಂದ ದರ್ಶನ್ ಸಂದರ್ಶಕರ ಕೊಠಡಿಗೆ ಆಗಮಿಸಿದರು. ಸುಮಾರು ಅರ್ಧ ಗಂಟೆಯವರೆಗೆ ಪತ್ನಿ , ಸಹೋದರ ಹಾಗೂ ಅಪ್ತರ ಜತೆ ಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆಯ ಬಗ್ಗೆ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿದವು. ಬಳಿಕ ಪತ್ನಿ ವಿಜಯಲಕ್ಷ್ಮೀ ತಂದಿದ್ದ ಎರಡು ಬ್ಯಾಗ್‌ಗಳನ್ನು ತೆಗೆದುಕೊಂಡು ಮರಳಿ ಹೈ ಸೆಕ್ಯೂರಿಟಿ ಸೆಲ್‌ಗೆ ದರ್ಶನ್ ಹೊರಟರು. ಜೈಲಿನ ಮುಂಭಾಗದಲ್ಲಿ ದರ್ಶನ್ ಕಂಡ ಕೂಡಲೇ ಅಭಿಮಾನಿಗಳು ಜೈ ಡಿ ಬಾಸ್ ಎಂದು ಘೋಷಣೆ ಕೂಗಿದರು. ದರ್ಶನ್ ಜಾಮೀನು ಅರ್ಜಿ ವಿಚಾರಣೆ ಹಾಗೂ ಕೋರ್ಟ್ ಕಲಾಪವನ್ನು ಅ. 4ಕ್ಕೆ ಮುಂದೂಡಲಾಗಿದೆ.