ಜಿಲ್ಲೆ

ದರ್ಶನ್ ಭೇಟಿ ಮಾಡಿದ ಪತ್ನಿ ವಿಜಯಲಕ್ಷ್ಮೀ

ಬಳ್ಳಾರಿ: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಭೇಟಿ ಮಾಡಲು ಪತ್ನಿ ವಿಜಯಲಕ್ಷ್ಮೀ, ಅಪ್ತ ಹೇಮಂತ ಹಾಗೂ ನಟ ಧನ್ವಿರ್ ಇಲ್ಲಿನ ಕೇಂದ್ರ ಕಾರಾಗೃಹಕ್ಕೆ ಮಂಗಳವಾರ ಸಂಜೆ ಆಗಮಿಸಿದರು.
ಇಲ್ಲಿಯವರೆಗೆ ಕೇವಲ ದರ್ಶನ್ ಭೇಟಿಗೆ ರಕ್ತ ಸಂಬಂಧಿಕರು ಹಾಗೂ ಕುಟುಂಬಸ್ಥರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ನ್ಯಾಯಾಲಯ ಅನುಮತಿ ಪಡೆದು ಪತ್ನಿ ವಿಜಯಲಕ್ಷ್ಮೀ ಜತೆ ಆಗಮಿಸಿದ ಇಬ್ಬರು ಅಪ್ತರು ಎರಡು ಬ್ಯಾಗ್‌ನಲ್ಲಿ ಡ್ರೈ ಫ್ರೂಟ್ಸ್, ಟೂತ್‌ಪೇಸ್ಟ್, ಸಂತೂರ್ ಸೋಪ್, ಹಣ್ಣು, ತಿಂಡಿ ತಿನಿಸುಗಳನ್ನು ತಂದಿದ್ದರು. ಜೈಲಿನೊಳಗೆ ಪ್ರವೇಶಿಸುತ್ತಿದ್ದಂತೆ ಜೈಲು ಸಿಬ್ಬಂದಿ ಮೂವರ ಆಧಾರ್‌ಕಾರ್ಡ್ ಪರಿಶೀಲಿಸಿದ ಬಳಿಕ ಸಂದರ್ಶಕರ ಕೋಣೆಗೆ ಕಳುಹಿಸಿದರು. ಹೈ ಸೆಕ್ಯೂರಿಟಿ ಸೆಲ್‌ನಿಂದ ವೈಟ್ ಟೀ ಶರ್ಟ್, ಬ್ಲೂ ಜೀನ್ಸ್ ಪ್ಯಾಂಟ್ ತೊಟ್ಟು ದರ್ಶನ್ ಹೊರಗಡೆ ಬರುವ ವೇಳೆ ಒಂದು ಕೈಯಲ್ಲಿ ಬ್ಯಾಗ್, ಪತ್ರ ಹಾಗೂ ಇನ್ನೊಂದು ಕೈನಲ್ಲಿ ಖಾಲಿ ಬ್ಯಾಗ್ ಹಿಡಿದು ನಗುತ್ತಾ ಬಂದರು. ಅರ್ಧಗಂಟೆಗೂ ಹೆಚ್ಚು ಕಾಲ ಪತ್ನಿ, ಅಪ್ತರ ಜತೆ ಮಾತನಾಡಿ ಮರಳಿ ಎರಡು ಬ್ಯಾಗ್ ಹಿಡಿದುಕೊಂಡು ಸೆಲ್‌ಗೆ ಹೊರಟರು. ಬಳಿಕ, ಪತ್ನಿ ವಿಜಯಲಕ್ಷ್ಮೀ ಜೈಲು ಅಧಿಕಾರಿಗಳ ಬಳಿ ಕೆಲ ನಿಮಿಷದವರೆಗೆ ಚರ್ಚಿಸಿ ನಂತರ ಹೊರಗಡೆ ಬಂದರು. ದರ್ಶನ್ ಭೇಟಿ ಬಳಿಕ ಪತ್ನಿ, ಅಪ್ತರ ಮುಖದಲ್ಲಿ ಯಾವುದೇ ದುಖಃ ಭಾವನೆ ಇರಲಿಲ್ಲ. ಪತ್ನಿ ವಿಜಯಲಕ್ಷ್ಮೀ ಹಸನ್ಮುಖಿಯಾಗಿಯೇ ನಟ ಧನ್ವಿರ್ ಜತೆ ಚರ್ಚಿಸುತ್ತಾ ಜೈಲಿನಿಂದ ಹೊರಬಂದರು.