ಪಾಂಡವಪುರ: ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರು ಮೇಲುಕೋಟೆ ವಿಧಾನಸಭಾ ಕ್ಷೇತ್ರದಿಂದ ಗೆದ್ದು ರಾಜ್ಯದ 223 ಕ್ಷೇತ್ರದ ರೈತರು ಮತ್ತು ದುಡಿಯುವ ವರ್ಗವನ್ನು ಪ್ರತಿನಿಧಿಸಿದ್ದರು. ಅದೇ ಹಾದಿಯಲ್ಲಿ ದರ್ಶನ್ ಪುಟ್ಟಣ್ಣಯ್ಯ ನಡೆಯುತ್ತಿದ್ದು, ಎಲ್ಲ ಜನರು ಪಕ್ಷಾತೀತವಾಗಿ ಅವರನ್ನು ಬೆಂಬಲಿಸುವ ಮೂಲಕ ಗೆಲುವು ತಂದುಕೊಡಲಿದ್ದಾರೆ ಎಂದು ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.
ಪುಟ್ಟಣ್ಣಯ್ಯ ರಾಜ್ಯದ ಜನರ ಏನೇ ಸಮಸ್ಯೆ ಇದರೂ ಅದನ್ನು ಸರ್ಕಾರದ ಮಟ್ಟದಲ್ಲಿ ಅಥವಾ ಸದನದಲ್ಲಿ ಪ್ರಸ್ತಾಪಿಸಿ ಸಮಸ್ಯೆಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಹೋರಾಟ ಮಾಡುತ್ತಿದ್ದರು. ದರ್ಶನ್ ಪುಟ್ಟಣ್ಣಯ್ಯ ಕೂಡ ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದ ವಿದೇಶದಲ್ಲಿನ ಕಂಪನಿ ಬಿಟ್ಟು ಜನರ ಮಧ್ಯದಲ್ಲಿ ಒಬ್ಬರಾಗಿ ಬದುಕಬೇಕೆಂದು ಇಲ್ಲಿಗೆ ಬಂದಿದ್ದಾರೆ. ಅವರ ಸರಳತೆ, ಸೌಮ್ಯ ಸ್ವಭಾವವನ್ನು ಮೆಚ್ಚಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಮತದಾರರು ಪಕ್ಷಾತೀತ, ಜಾತ್ಯತೀತ ಹಾಗೂ ಧರ್ಮಾತೀತವಾಗಿ ಜನರೇ ಒಂದಾಗಿ ಚುನಾವಣೆ ಮಾಡುತ್ತಿದ್ದು, ದರ್ಶನ್ ಗೆಲ್ಲಿಸಲು ನಿರ್ಧರಿಸದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರೈತ ನಾಯಕಿ ಸುನೀತಾ ಪುಟ್ಟಣ್ಣಯ್ಯ ಮಾತನಾಡಿ, ರಾಜ್ಯದಲ್ಲಿ ರೈತರ ಸಮಸ್ಯೆ ಕೇಳುವ ಯಾವೊಬ್ಬ ಜನಪ್ರತಿನಿಧಿಯೂ ಇಲ್ಲ. ಕಬ್ಬು ಮತ್ತು ಹಾಲಿನ ದರ ಹೆಚ್ಚಳಕ್ಕಾಗಿ ರೈತ ಸಂಘ 109 ದಿನಗಳ ಕಾಲ ನಿರಂತರವಾಗಿ ಹೋರಾಟ ನಡೆಸಿತ್ತು. ಆದರೆ ಜಿಲ್ಲೆಯ ಯಾವೊಬ್ಬ ಶಾಸಕನೂ ಬಂದು ರೈತರ ಸಮಸ್ಯೆ ಕೇಳುವ ಔದಾರ್ಯ ತೋರಲಿಲ್ಲ. ರೈತರ ಸಮಸ್ಯೆಗಳನ್ನು ಸದನದಲ್ಲಿ ಮಂಡಿಸಿ ನ್ಯಾಯ ಒದಗಿಸಿಕೊಡುವ ಒಬ್ಬ ನಾಯಕ ರಾಜ್ಯಕ್ಕೆ ಬೇಕಾಗಿದೆ. ದರ್ಶನ್ ವಿಧಾನಸೌದಕ್ಕೆ ಹೋದರೆ ರೈತರ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರೈತ ಸಂಘದ ಹಿರಿಯ ಹೋರಾಟಗಾರ ಎಚ್.ಆರ್.ಬಸವರಾಜು ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಿಸಾನ್ ಸಮಿತಿ ನಿರಂತರವಾಗಿ 14 ತಿಂಗಳುಗಳ ಕಾಲ ಹೋರಾಟ ಮಾಡಿದ ಪರಿಣಾಮ ಜನವಿರೋಧಿ ಕಾಯ್ದೆಗಳನ್ನು ಸರ್ಕಾರ ವಾಪಸ್ ಪಡೆಯಿತು. ರಾಜ್ಯದ ಚುನಾವಣೆಯ ಫಲಿತಾಂಶವನ್ನು ಇಡೀ ದೇಶದ ಜನ ಗಮನಿಸುತ್ತಿದ್ದು, ಈ ಚುನಾವಣೆ ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ. ರೈತರು ಮತ್ತು ದುಡಿಯುವ ವರ್ಗವನ್ನು ಪ್ರತಿನಿಧಿಸಲು ಬಾಗೇಪಲ್ಲಿ ಕ್ಷೇತ್ರದಿಂದ ಸ್ಪರ್ಧಿಸಿರುವ ಡಾ.ಅನಿಲ್ ಹಾಗೂ ದರ್ಶನ್ ಪುಟ್ಟಣ್ಣಯ್ಯ ಅವರ ಗೆಲುವು ಅನಿವಾರ್ಯವಾಗಿದೆ. ಎರಡು ಕ್ಷೇತ್ರಗಳಲ್ಲೂ ನಾವು ಗೆದ್ದೇ ಗೆಲ್ಲುತ್ತೇವೆ ಎಂಬ ಭರವಸೆ ಮೂಡಿಸಿದೆ. ಹೀಗಾಗಿ ಸಂಯುಕ್ತ ಕರ್ನಾಟಕ ಹೋರಾಟ ಸಮಿತಿ ದರ್ಶನ್ ಪುಟ್ಟಣ್ಣಯ್ಯ ಅವರ ಬೆಂಬಲಕ್ಕೆ ನಿಂತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜನಶಕ್ತಿ ಅಧ್ಯಕ್ಷ ನೂರ್ ಶ್ರೀಧರ್, ಸಿದ್ದರಾಜು, ಕರ್ನಾಟಕ ಪ್ರಾಂತ ರೈತ ಸಂಘದ ಯಶವಂತ, ರಾಮಚಂದ್ರು, ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಮುಖಂಡ ಹಾರೋಹಳ್ಳಿ ಸೋಮಶೇಖರ್, ಹೊಸಕೆರೆ ಚಂದ್ರಪ್ಪ, ನೂರ್ ಸರಸ್ವತಿ ಇತರರು ಇದ್ದರು.