ಜಿಲ್ಲೆ

ದರೋಡೆಗೆ ಹೊಂಚು ಹಾಕುತ್ತಿದ್ದ ಐವರ ಬಂಧನ

ಚಿತ್ರದುರ್ಗ: ಹೊಳಲ್ಕೆರೆ ತಾಲೂಕು ಎಚ್‌ಡಿಪುರ ಬಾರೆಕಟ್ಟೆ ಕ್ರಾಸ್ ಬಳಿ ದರೋಡೆಗೆ ಹೊಂಚು ಹಾಕುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಫೆ.10 ರಂದು ಬಂಧಿಸಿದ್ದಾರೆ.

ಗಸ್ತು ವೇಳೆ ಅನುಮಾನಾಸ್ಪದವಾಗಿ ಬೈಕ್‌ಗಳೊಂದಿಗೆ ನಿಂತಿದ್ದ ಇವರು ಪೊಲೀಸರನ್ನು ನೋಡಿ ಪರಾರಿಗೆ ಯತ್ನಿಸಿದ್ದರು. ಆದರೆ ಪೊಲೀಸರು ಬೆನ್ನತ್ತಿ ನಾಲ್ವರು ಆರೋಪಿಗಳಾದ ಲಕ್ಕಿಹಳ್ಳಿಯ ಕೆ.ಭೂತಪ್ಪ, ಚಿತ್ರದುರ್ಗದ ರವೀಂದ್ರ, ರಾಜೇಂದ್ರ, ಮಂಜುನಾಥ ಅವರನ್ನು ಬಂಧಿಸಿ ಅವರಿಂದ ಕಬ್ಬಿಣ ಸಲಾಕೆ, ಖಾರದ ಪುಡಿ, ಮೋಟಾರ್‌ಸೈಕಲ್ ಚೈನ್, ಮಚ್ಚು, ಹಗ್ಗ ಹಾಗೂ ಅಂದಾಜು 8 ಕೆಜಿ ಶ್ರೀ ಗಂಧ ವಶಪಡಿಸಿಕೊಂಡಿದ್ದಾರೆ ಎಂದು ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಕರಣದ ತನಿಖೆ ತೀವ್ರಗೊಳಿಸಿದಾಗ ಪರಾರಿಯಾಗಿದ್ದ ಮತ್ತೊಬ್ಬ ಆರೋಪಿ ಚಿತ್ರದು ರ್ಗದ ಚಮನ್‌ಸಾಬ್‌ನನ್ನು ಬಂಧಿಸಲಾಗಿದೆ. ಆರೋಪಿತರು ಬಾರೆಕಟ್ಟೆ ಕ್ರಾಸ್ ಬಳಿಯ ಜಮೀನೊಂದರಲ್ಲಿ ಬಚ್ಚಿಟ್ಟಿದ್ದ 70 ಕೆಜಿ ಸಹಿತ ಅ ಂದಾಜು 5 ಲಕ್ಷ ರೂ. ಮೌಲ್ಯದ ಶ್ರೀಗಂಧ ವಶಪಡಿಸಿಕೊಳ್ಳಲಾಗಿದೆ.

ಈ ಗ್ಯಾಂಗ್ ಹಿಂದೆ ಉಪ್ಪಿಗೇರನಹಳ್ಳಿ ದಿನೇಶ್ ಅವರ ತೋಟದಲ್ಲಿ ಕಳೆದ ಸೆಪ್ಟೆಂಬರ್ ಮತ್ತು ಡಿಸೆಂಬರ್‌ನಲ್ಲಿ 2 ಬಾರಿ ಶ್ರೀಗಂಧ ಕಳವು ಮಾಡಿತ್ತು. ತನಿಖೆ ನಿಟ್ಟಿನಲ್ಲಿ ಆಂಧ್ರಪ್ರದೇಶದ ಅಗಲಿ ಬಳಿಯ ಶ್ರೀಗಂಧ ಎಣ್ಣೆ ಉತ್ಪನ್ನ ಕಾರ್ಖಾನೆಗೂ ಪೊಲೀಸರ ತಂಡ ಹೋಗಿ ಬಂದಿದೆ ಎಂದು ಎಸ್‌ಪಿ ವಿವರಿಸಿದರು.

ಅಪರಾಧ ಪ್ರಕರಣಗಳ ನಿಯಂತ್ರಿಸಲು ಜಿಲ್ಲೆಯಲ್ಲಿ ರಾತ್ರಿ ಗಸ್ತು ಚುರುಕುಗೊಳಿಸಲಾಗಿದೆ. ಬೀಗ ಹಾಕಿದ ಮನೆಗಳನ್ನು ಚೆಕ್ ಮಾಡ ಲಾಗುತ್ತಿದೆ, ಅನುಮಾನಾಸ್ಪದ ವ್ಯಕ್ತಿಗಳ ಬೆರಳಚ್ಚು ಪಡೆಯಲಾಗುತ್ತಿದೆ. ಅಪಘಾತಗಳನ್ನು ತಪ್ಪಿಸಲು ತೆಗೆದುಕೊಳ್ಳಬೇಕಾಗಿರುವ ಕ್ರಮಗಳ ಕುರಿತು ರಸ್ತೆ ಸುರಕ್ಷತಾ ಸಭೆಯಲ್ಲಿ ಚರ್ಚಿಸಿ ಕ್ರಮ ವಹಿಸುವುದಾಗಿ ಹೇಳಿದರು.

ಹೊಳಲ್ಕೆರೆ ಸಿಪಿಐ ಎಂ.ಬಿ.ಚಿಕ್ಕಣ್ಣನವರ್, ಚಿತ್ರಹಳ್ಳಿ ಗೇಟ್ ಪಿಎಸ್‌ಐ ಕಾಂತರಾಜು, ಸಿಬ್ಬಂದಿ ಆರ್.ಡಿ.ರಮೇಶ್‌ಕುಮಾರ್, ಶ್ರೀಧರ್, ಯಶೋಧರ, ನದಾಫ್, ರಾಜು, ನವೀನ್‌ಕುಮಾರ್, ಕೆ.ಜಿ.ಲೋಕೇಶ್, ಬಿ.ಜಿ.ರವಿಕುಮಾರ, ಎನ್.ತಿಮ್ಮಣ್ಣ ಅವರಿದ್ದ ತನಿಖಾ ತಂಡದ ಕಾರ‌್ಯವನ್ನು ಶ್ಲಾಘಿಸಿದರು.