ದಾವಣಗೆರೆ: ದಾವಣಗೆರೆ ಹೊರವಲಯದಲ್ಲಿ ಆಟೋರಿಕ್ಷಾ ಮೇಲೆ ಮಚ್ಚಿನಿಂದ ದಾಳಿ ನಡೆಸಿ, ಖಾರದಪುಡಿ ಎರಚಿ 19.80 ಲಕ್ಷ ರೂ. ಇದ್ದ ಬ್ಯಾಗ್ ದೋಚಿದ್ದ ತಂಡದ ಆರೋಪಿತರನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಜನೇಯ ಕಾಟನ್‌ಮಿಲ್ ನಿವಾಸಿ ಸನಾವುಲ್ಲಾ ಆಲಿಯಾಸ್ ಸನಾ, ಸೈಫುಲ್ಲಾ ಆಲಿಯಾಸ್ ಸೈಫುನನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕನನ್ನು ವಶಕ್ಕೆ ಪಡೆದು ಬಾಲಮಂದಿರದಲ್ಲಿ ಇರಿಸಲಾಗಿದೆ.
ಅಡಕೆ ಖೇಣಿ ಪಡೆದಿದ್ದ ರೈತರಿಗೆ ನೀಡಲೆಂದು ಸ್ನೇಹಿತನಿಂದ ಪಡೆದಿದ್ದ 19.80 ಲಕ್ಷ ರೂ.ನೊಂದಿಗೆ ಭದ್ರಾವತಿಯ ದೇವರಾಜ್
ಏ.11ರಂದು ರಾಷ್ಟ್ರೀಯ ಹೆದ್ದಾರಿ ಸಮೀಪದ ಪಿ.ಬಸವನಗೌಡ ಬಡಾವಣೆಯ ಸೇತುವೆ ಬಳಿ ತೆರಳುತ್ತಿದ್ದರು. ಐವರು ದರೋಡೆಕೋರರ ತಂಡ ಆಟೋ ಗ್ಲಾಸ್ ಒಡೆದು ಕಣ್ಣಿಗೆ ಖಾರದಪುಡಿ ಎರಚಿ, ಹಣದ ಬ್ಯಾಗ್ ದೋಚಿದ್ದರು.
ದಾವಣಗೆರೆ ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ವಿದ್ಯಾನಗರ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಭಾವತಿ ಸಿ ಶೇತಸನದಿ ನೇತೃತ್ವದಲ್ಲಿ ಠಾಣೆ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿ, ಕಳವಾಗಿದ್ದ ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ 1.20 ಲಕ್ಷ ರೂ. ಮೌಲ್ಯದ ಒಂದು ಪ್ಯಾಸೆಂಜರ್ ಆಟೋ, 2 ಲಕ್ಷ ರೂ. ಬೆಲೆಯ ಒಂದು ಮಹೀಂದ್ರಾ ಸುಪ್ರೋ ಪ್ಯಾಸೆಂಜರ್ ಆಟೋವನ್ನು ವಶಪಡಿಸಿಕೊಂಡಿದೆ. ಪತ್ತೆ ಕಾರ್ಯಾಚರಣೆಗೆ ಎಸ್ಪಿ ಸಿ.ಬಿ.ರಿಷ್ಯಂತ್ ಶ್ಲಾಘಿಸಿದ್ದು, ಪ್ರಕರಣದಲ್ಲಿ ತಲೆಮರೆಸಿಕೊಂಡ ಇತರೆ ಇಬ್ಬರಿಗೆ ಶೋಧ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.