ಜಿಲ್ಲೆ

ದರ ಏರಿಕೆ ಈಗ ಸರ್ಕಾರಿ ಆಸ್ಪತ್ರೆಗಳ ಸರದಿ - ರೋಗಿಗಳಿಗೆ ಚಿಕಿತ್ಸಾ ಶುಲ್ಕ ಹೆಚ್ಚಳದ ಬಿಸಿ

ಬೆಂಗಳೂರು: ನಿತ್ಯ ಏರಿಕೆಯಾಗುತ್ತಿರುವ ಅಗತ್ಯ ವಸ್ತುಗಳ ದರದಿಂದ ಈಗಾಗಲೇ ಕಂಗೆಟ್ಟಿರುವ ರಾಜ್ಯದ ಜನರಿಗೆ ಈಗ ಸರ್ಕಾರಿ ಆಸ್ಪತ್ರೆಗಳ ದರ ಹೆಚ್ಚಳದ ಬಿಸಿ ತಟ್ಟಲಿದೆ. ಹೊರ ರೋಗಿಗಳ ಸೇವೆ, ಒಳ ರೋಗಿಗಳ ಸೇವೆ, ಪ್ರಯೋಗಾಲಯ ಪರೀಕ್ಷೆ ಸೇರಿ ಹಲವು ಸೇವೆಗಳ ಶುಲ್ಕವನ್ನು ಶೇ. 15 ರಿಂದ 20 ಹೆಚ್ಚಿಸಲಾಗಿದೆ.

ನಾಡಿನ ನಾನಾ ಭಾಗದಿಂದ ಸಾವಿರಾರು ಮಂದಿ ಹೆಚ್ಚಿನ ಚಿಕಿತ್ಸೆಗೆಂದು ವಿಕ್ಟೋರಿಯಾ, ವಾಣಿವಿಲಾಸ, ಬೌರಿಂಗ್, ಲೇಡಿ ಕರ್ಜನ್ ಮತ್ತು ಮಿಂಟೋ ಕಣ್ಣಿನ ಆಸ್ಪತ್ರೆಗೆ ಆಗಮಿಸುತ್ತಾರೆ. ಈಗ ಈ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವೆಚ್ಚ ಏರಿಕೆಯಾಗಿದೆ. ರಾಜ್ಯದ ಲಕ್ಷಾಂತರ ಬಿಪಿಎಲ್ ಕಾರ್ಡ್ ರದ್ದಾಗಿರುವ ಬೆನ್ನಲ್ಲೇ ಆಸ್ಪತ್ರೆಗಳಲ್ಲಿನ ಸೇವಾ ಶುಲ್ಕ ಹೆಚ್ಚಳ ಆಗಿರುವುದು ಜನರನ್ನು ಕಂಗಾಲಾಗಿಸಿದೆ.

ನ.1ರಿಂದಲೇ ಜಾರಿ:

ಬೆಂಗಳೂರು ವೈದ್ಯ ಕಾಲೇಜು ಮತ್ತು ಸಂಶೋಧನೆ ಸಂಸ್ಥೆ (ಬಿಎಂಸಿಆರ್‌ಐ) ಸಹಯೋಗದ ಆಸ್ಪತ್ರೆಗಳಲ್ಲಿ ನ.1ರಿಂದಲೇ ಸೇವಾ ಶುಲ್ಕ ಪರಿಷ್ಕೃರಿಸಲಾಗಿದೆ. ಇದನ್ನು ಸಮರ್ಥಿಸಿಕೊಂಡಿರುವ ಸರ್ಕಾರ, ಆಸ್ಪತ್ರೆಗಳಲ್ಲಿ ಹೆಚ್ಚಿಸಿರುವ ಸೇವಾ ಶುಲ್ಕ ಅನ್ಯ ಕಾರ್ಯಗಳಿಗೆ ಬಳಕೆಯಾಗುವುದಿಲ್ಲ. ಬದಲಿಗೆ ಆಯಾ ಆಸ್ಪತ್ರೆಗಳ ಅಭಿವೃದ್ಧಿಗೆ ಬಳಕೆ ಮಾಡಲಾಗುತ್ತದೆ ಎಂದು ಹೇಳಿದೆ.

ಆಸ್ಪತ್ರೆಗಳ ಸಮರ್ಥನೆ:

ಬಹಳ ವರ್ಷಗಳ ನಂತರ ಆಸ್ಪತ್ರೆಗಳಲ್ಲಿ ಸೇವಾ ಶುಲ್ಕ ಹೆಚ್ಚಿಸಲಾಗಿದೆ. ಆದೂ ಶೇ. 15 ರಿಂದ 20 ಮಾತ್ರ. ಈ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಶೇ. 70 ಮಂದಿ ಬಿಪಿಎಲ್ ಕಾರ್ಡುದಾರರು. ಅವರೆಲ್ಲರೂ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಉಚಿತ ಚಿಕಿತ್ಸೆ ಪಡೆಯುತ್ತಾರೆ. ಉಳಿದಂತೆ ಶೇ. 30 ಮಂದಿ ಮಾತ್ರ ಹಣ ಪಾವತಿಸಬೇಕಾಗುತ್ತದೆ. ಹಾಗಾಗಿ ಇದರಿಂದ ಬಡವರಿಗೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ದರ ಹೆಚ್ಚಳ ಮಾಡಿರುವುದನ್ನು ಆಸ್ಪತ್ರೆಗಳು ಸಮರ್ಥಿಸಿಕೊಂಡಿವೆ.

ಯಾವ ಯಾವ ಸೇವೆಗಳ ದರ ಏರಿಕೆ

ಸೇವೆಗಳು -ಹಿಂದಿನ ದರ -ಪರಿಷ್ಕೃತ ದರ

ಹೊರ ರೋಗಿಗಳ ಸೇವೆ- 10 ರೂ. -20 ರೂ.

ಒಳರೋಗಿಗಳ ದಾಖಲಾತಿ -25 ರೂ. -50 ರೂ.

ರಕ್ತ ಪರೀಕ್ಷೆ -70 ರೂ.- 120 ರೂ.

ವಾರ್ಡ್ ಶುಲ್ಕ -25 ರೂ. -50 ರೂ.

ತ್ಯಾಜ್ಯ ನಿರ್ವಹಣೆ ದರ -10 ರೂ. -50 ರೂ.