ರೈತ ಸಂಘದ ಜಿಲ್ಲಾ ಶಾಖೆ ಅಧ್ಯಕ್ಷ ಎನ್.ಜಿ.ಉದ್ದೆಗೌಡ  
ಜಿಲ್ಲೆ

ದಯಾಮರಣ ಕೇಳಲು ಪಾದಯಾತ್ರೆ

ಚಿಕ್ಕಮಗಳೂರು: ಗೋಮಾಳ ಜಾಗವನ್ನು ಖಾಸಗಿಯವರು ತಮ್ಮ ಹೆಸರಿಗೆ ಮಾಡಿಕೊಳ್ಳಲು ಪ್ರಯತ್ನ ಪಡುತ್ತಿದ್ದು ಇದನ್ನು ವಿರೋಧಿಸಿ ಜನಜಾನುವಾರುಗಳಿಗೆ ದಯಾಮರಣ ನೀಡುವಂತೆ ಚಿಕ್ಕಮಗಳೂರಿನಿಂದ ಬೆಂಗಳೂರಿನ ವಿಧಾನಸೌಧದವರೆಗೆ ಪಾದಯಾತ್ರೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ರೈತ ಸಂಘದ ಜಿಲ್ಲಾ ಶಾಖೆ ಅಧ್ಯಕ್ಷ ಎನ್.ಜಿ.ಉದ್ದೆಗೌಡ ತಿಳಿಸಿದರು.

ನಗರದ ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ. 13ರಂದು ಬೆಳಗ್ಗೆ 8 ಗಂಟೆಗೆ ಚಿಕ್ಕಮಗಳೂರು ಜಿಲ್ಲೆಯ ನೆರಡಿ ಗ್ರಾಮದಿಂದ 30 ರೈತರು ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಲಿದ್ದೇವೆ. ಚಿಕ್ಕಮಗಳೂರು, ಬೇಲೂರು, ಹಗರೆ, ಹಾಸನ, ಚನ್ನರಾಯಪಟ್ಟಣ, ಎಡೆಯೂರು, ನೆಲಮಂಗಲ ಮಾರ್ಗವಾಗಿ ವಿಧಾನಸೌಧದ ವರೆಗೆ ಪಾದಯಾತ್ರೆ ನಡೆಸಲಿದ್ದೇವೆ ಎಂದು ಮಾಹಿತಿ ನೀಡಿದರು.

ನೆರಡಿ ಗ್ರಾಮದ ಸರ್ವೆ ನಂಬರ್ 35ರಲ್ಲಿ 25 ಎಕರೆ 15 ಗುಂಟೆ ಮತ್ತು 2 ಎಕರೆ 20 ಗುಂಟೆ ಜಾಗವು ಗೋಮಾಳವಾಗಿದೆ. ಹಿಂದಿನಿಂದಲೂ ಇಲ್ಲಿ ಜಾನುವಾರುಗಳು ಮೇಯ್ದುಕೊಂಡು ಬರುತ್ತಿದ್ದವು. ಆದರೆ ಇದೀಗ ಆ ಜಾಗವನ್ನು ಪಿತೂರಿ ಮಾಡಿ ತಮ್ಮ ಹೆಸರಿಗೆ ಮಾಡಿಕೊಳ್ಳಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಜಾನುವಾರುಗಳಿಗೆ ಮೇಯಲು ಜಾಗವಿಲ್ಲದೆ ಸಾಯುವ ಪರಿಸ್ಥಿತಿ ಎದುರಾಗಿದೆ. ಇಲ್ಲಿನ ರೈತರು ಜಾನುವಾರುಗಳನ್ನೇ ನಂಬಿಕೊಂಡಿರುವುದರಿಂದ ಜಾನುವಾರುಗಳಿಲ್ಲದೆ ಬದುಕಲು ಸಾಧ್ಯವಿಲ್ಲ. ಹೀಗಾಗಿ ಜಾನುವಾರುಗಳೊಂದಿಗೆ ರೈತರಿಗೂ ದಯಾ ಮರಣಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಸಲ್ಲಿಸಲಾಗುವುದು ಎಂದರು.

ಸಚಿವರು ಅರಣ್ಯ ಪ್ರದೇಶದಲ್ಲಿ ಜಾನುವಾರುಗಳನ್ನು ಮೇಯಿಸುವಂತಿಲ್ಲ ಎನ್ನುತ್ತಾರೆ. ಆದರೆ ಇರುವ ಗೋಮಾಳ ಜಾಗ ಉಳ್ಳವರ ಪಾಲಾಗುತ್ತಿದೆ. ಕೂಡಲೇ ಗುಂಡುತೋಪು, ಕೆರೆಕಟ್ಟೆ, ಡ್ಯಾಮ್ ಹಾಗೂ ಗೋಮಾಳ ಜಾಗಗಳು ಒತ್ತುವರಿಯಾಗಿರುವುದನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಮಹೇಶ್, ಪ್ರಮುಖರಾದ ಕೆಂಪಮ್ಮ, ರಾಜೇಗೌಡ, ಸಂದೇಶ್, ನಿರಂಜನ ಮೂರ್ತಿ ಮತ್ತಿತರರಿದ್ದರು.