ಜಿಲ್ಲೆ

ದನಿ ಎತ್ತಿ ಸಂವಿಧಾನಬದ್ಧ ಹಕ್ಕುಗಳನ್ನು ಪಡೆಯಲು ಹೆಣ್ಣು ಮಕ್ಕಳು ಮುಂದಾಗಬೇಕು : ಡಾ. ಎಚ್.ಎಲ್.ಮಲ್ಲೇಶಗೌಡ

ಹಾಸನ: ಪುರುಷಾಧಿಪತ್ಯದ ಸಮಾಜ ಹೆಣ್ಣುಮಕ್ಕಳ ಮೇಲೆ ನಿರಂತರ ದೌರ್ಜನ್ಯ ನಡೆಸಿಕೊಂಡು ಬರುತ್ತಿದೆ. ದೌರ್ಜನ್ಯ, ಶೋಷಣೆ ವಿರುದ್ಧ ದನಿ ಎತ್ತಿ ಸಂವಿಧಾನಬದ್ಧ ಹಕ್ಕುಗಳನ್ನು ಪಡೆಯಲು ಹೆಣ್ಣು ಮಕ್ಕಳು ಮುಂದಾಗಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ ಹೇಳಿದರು.


ನಗರದ ಗಂಧದಕೋಠಿ ಆವರಣದಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಮಹಿಳಾ ದೌರ್ಜನ್ಯ ತಡೆ ಸಮಿತಿ, ಅಂತರ ಗುಣಮಟ್ಟ ಭರವಸಾ ಕೋಶ ಮತ್ತು ರೋಟರಿ ಕ್ಲಬ್ ಆಫ್ ಕ್ವಾಂಟಾ ವತಿಯಿಂದ ಆಯೋಜನೆಗೊಂಡಿದ್ದ ‘ಮಹಿಳಾ ದೌರ್ಜನ್ಯ ತಡೆ ಅರಿವು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣು ಮಕ್ಕಳನ್ನು ಹುಟ್ಟಿನಿಂದಲೇ ಕೀಳಾಗಿ ಕಾಣುವ ಮನಸ್ಥಿತಿ ಇನ್ನೂ ನಮ್ಮ ಸಮಾಜದಲ್ಲಿದೆ ಎಂದು ಬೇಸರಿಸಿದರು.


ಗಂಡು ಮಗು ಜನಿಸಿದರೆ ಮನೆಯಲ್ಲಿ ಸಂತಸ ವ್ಯಕ್ತಪಡಿಸುತ್ತಾರೆ, ಆದರೆ ಹೆಣ್ಣು ಮಗು ಜನಿಸಿದರೆ ನೀರವ ಮೌನವನ್ನು ವ್ಯಕ್ತಪಡಿಸುವಂತಹ ಸನ್ನಿವೇಶವನ್ನು ನಾವು ನೋಡುತ್ತಿದ್ದೇವೆೆ. ಆಧುನಿಕತೆ ಹೆಚ್ಚುತ್ತಿದ್ದರೂ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಕಡಿಮೆ ಆಗುತ್ತಿಲ್ಲ. ದೌರ್ಜನ್ಯದ ವಿಧಾನಗಳು ಹೊಸ ರೂಪ ಪಡೆದುಕೊಳ್ಳುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.


ಹೆಣ್ಣು ಮಕ್ಕಳು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸ್ವಾವಲಂಬನೆ ಗಳಿಸಿದಾಗ ತಮ್ಮ ಮೇಲೆ ನಡೆಯುವ ದೌರ್ಜನ್ಯವನ್ನು ಎದುರಿಸುವ ಶಕ್ತಿ ಪಡೆಯಬಹುದು. ವಿದ್ಯಾರ್ಥಿ ಹಂತದಲ್ಲೇ ಅನ್ಯಾಯ, ಅಸಮಾನತೆಯನ್ನು ಪ್ರಶ್ನಿಸಿ ಪ್ರತಿಭಟಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.


ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಕ್ಕಳ ರಕ್ಷಣಾಧಿಕಾರಿ ಕಾಂತರಾಜು ಮಾತನಾಡಿ, ಮಹಿಳೆಯರ ಮೇಲಿನ ದೌರ್ಜನ್ಯ ಒಂದಲ್ಲಾ ಒಂದು ರೀತಿಯಲ್ಲಿ ಶತಮಾನಗಳಿಂದಲೂ ನಡೆಯುತ್ತಾ ಬರುತ್ತಿದೆ. ಅತ್ಯಾಚಾರ, ಕಳ್ಳ ಸಾಗಣಿಕೆ, ಕೌಟುಂಬಿಕ ದೌರ್ಜನ್ಯ, ವರದಕ್ಷಣಿ ಕಿರುಕುಳಗಳು ಆಧುನಿಕ ಸಮಾಜದಲ್ಲಿ ಹೆಚ್ಚುತ್ತಿವೆ ಎಂದು ತಿಳಿಸಿದರು.


ಮಹಿಳೆಯನ್ನು ಒಂದು ಸರಕಿನ ರೀತಿ ಬಿಂಬಿಸುವ ವ್ಯವಸ್ಥೆ ಕೊನೆಯಾಗಬೇಕಿದೆ. ಮನರಂಜನಾ ಮಾರುಕಟ್ಟೆಯಲ್ಲಿ ಹೆಣ್ಣನ್ನು ಅಸಭ್ಯ ರೀತಿಯಲ್ಲಿ ಬಿಂಬಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಅಧ್ಯಕ್ಞತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಜಿ.ಕವಿತಾ ಮಾತನಾಡಿ, ಮಹಿಳೆ ತಾನು ಹುಟ್ಟಿ ಬೆಳೆದ ಮನೆಯಲ್ಲೇ ದೌರ್ಜನ್ಯ ಎದುರಿಸುವ ಪರಿಸ್ಥಿತಿ ಇದೆ. ಮುಟ್ಟಾದ ಹೆಣ್ಣು ಮಗಳನ್ನು ಮನೆಯಿಂದ ದೂರ ಇಡುವಂತಹ ಹೀನ ಪದ್ಧತಿಗಳು ಇಂದಿಗೂ ಮುಂದುವರಿದಿವೆ. ಈ ಕುರಿತು ಪೋಷಕರಲ್ಲಿ ಅರಿವು ಮೂಡಿಸಲ ಕೆಲಸ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.


ಮಹಿಳಾ ದೌರ್ಜನ್ಯ ತಡೆ ಸಮಿತಿ ಸಂಚಾಲಕಿ ಹಾಗೂ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಎಂ.ವಿ. ಹೇಮಾವತಿ ಸ್ವಾಗತಿಸಿದರು. ಉಪನ್ಯಾಸಕ ಶಿವಪ್ಪ ಕಾರ್ಯಕ್ರಮ ನಿರೂಪಿಸಿದರು.


ರೋಟರಿ ಕ್ಲಬ್ ಆಫ್ ಕ್ವಾಂಟಾ ಅಧ್ಯಕ್ಷ ಪಿ.ಎಂ. ಚಂದ್ರಶೇಖರ್, ಕಾರ್ಯಕರ್ಶಿ ಬಿ.ಆರ್. ಬೊಮ್ಮೆಗೌಡ, ಮಾಜಿ ಅಧ್ಯಕ್ಷ ಬಿ.ಟಿ. ಶಿವಕುಮಾರ್, ಖಜಾಂಚಿ ಪರಮೇಶ್ವರ್ ಇತರರು ಇದ್ದರು.