ಜಿಲ್ಲೆ

ದನದ ಮೇಲೆ ಚಿರತೆ ದಾಳಿ; ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನು

ಕಾರ್ಗಲ್: ಜೋಗದ ಕೆಪಿಸಿ ಎಸ್‌ವಿಪಿ ಕಾಲನಿಯಲ್ಲಿ ಚಿರತೆಯೊಂದು ಮಂಗಳವಾರ ರಾತ್ರಿ ದನವೊಂದರ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ. ಇದು ಕೆಪಿಸಿ ಕಾಲನಿಯ ಕ್ರೀಡಾಂಗಣದ ಭಾಗದಲ್ಲಿ ನಿಗಮ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೆಪಿಸಿ ನಿಗಮದ ನೌಕರರ ಮನೆಗಳು ಸುತ್ತಲೂ ಇದ್ದು ಕಾಲನಿಯ ಮಧ್ಯ ಭಾಗದಲ್ಲೇ ಈ ಘಟನೆ ನಡೆದಿದೆ.

ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು ಹೆಜ್ಜೆ ಗುರುತುಗಳನ್ನು ಕಂಡು ಇದು ಚಿರತೆ ಎಂದು ದೃಢಪಡಿಸಿದ್ದಾರೆ. ಹಾಗಾಗಿ ಬುಧವಾರ ರಾತ್ರಿಯೇ ಚಿರತೆಯ ಸೆರೆಗಾಗಿ ಬೋನು ಇಟ್ಟಿದ್ದಾರೆ. ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ 15 ದಿನಗಳಿಂದ ಜೋಗದ ವಿವಿಧ ಪ್ರದೇಶಗಳಲ್ಲಿ ಚಿರತೆಯ ಸೆರೆಗಾಗಿ ಬೋನನ್ನು ಇಡಲಾಗಿತ್ತು. ಮೊದಲು ಜೋಗದ ಫಾತಿಮಾಪುರ, ನಂತರ ವರ್ಕ್‌ಮನ್ ಬ್ಲಾಕ್, ಇದೀಗ ಎಸ್‌ವಿಪಿ ಕಾಲನಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಹಾಗಾಗಿ ಅಲ್ಲಿಟ್ಟಿದ್ದ ಬೋನನ್ನು ಸ್ಥಳಾಂತರ ಮಾಡಿ ಇಡಲಾಗಿದೆ ಎಂದು ಕಾರ್ಗಲ್ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಕೆ.ಬಿ.ಛಾಯಾ ‘ವಿಜಯವಾಣಿ’ಗೆ ತಿಳಿಸಿದರು.