ಜಿಲ್ಲೆ

ದನಗಳ ಮೇವಿಗೆ ತೊಂದರೆ ಕೊಡದಿರಿ

ಚಾಮರಾಜನಗರ: ಅರಣ್ಯ ಪ್ರದೇಶಗಳಿಗೆ ಜಾನುವಾರುಗಳ ನಿಬರ್ಂಂಧ ಸಂಬಂಧ ಅರಣ್ಯ ಸಚಿವರು ಹೊರಡಿಸಿದ ಆದೇಶಗಳು ರೈತರಲ್ಲಿ ಗೊಂದಲವನ್ನು ಸೃಷ್ಟಿಸುವಂತಾಗಿದ್ದು, ದನಗಳ ಮೇವಿಗೆ ತೊಂದರೆ ಕೊಡದಿರಿ ಎಂಬ ಆಗ್ರಹ ಕೇಳಿಬರುತ್ತಿದೆ.

ಹನೂರು ತಾಲೂಕಿನ ಮಲೆಮಹದೇಶ್ವರ ವನ್ಯಜೀವಿ ಧಾಮದ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ನಡೆದ ಹುಲಿಗಳ ಸಾವಿನ ಪ್ರಕರಣದ ಬೆನ್ನಲ್ಲೇ ಸಂಬಂಧಿಸಿದಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ರಾಜ್ಯದ ಅರಣ್ಯ ಪ್ರದೇಶದೊಳಗೆ ಜಾನುವಾರುಗಳ ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಿದ್ದರು. ಈ ಕುರಿತು ರೈತರು ಮತ್ತು ಅರಣ್ಯವಾಸಿಗಳಿಂದ ತೀವ್ರವಾದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮತ್ತೊಂದು ಆದೇಶ ಹೊರಡಿಸಿ, ಹೊರರಾಜ್ಯದ ಜಾನುವಾರುಗಳಿಗೆ ಮಾತ್ರ ನಿಷೇಧ ವಿಧಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಈ ಆದೇಶಗಳನ್ನು ಗಮನಿಸಿದ ರೈತ ಮುಖಂಡರು ಹಾಗೂ ಅರಣ್ಯವಾಸಿಗಳು ನಮ್ಮನ್ನು ಸುಖಾಸುಮ್ಮನೆ ಅರಣ್ಯ ಸಚಿವರು ಗೊಂದಲಕ್ಕೆ ಹೀಡುಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಅರಣ್ಯ ಸಂವರ್ಧನೆ, ಉದ್ಯೋಗ ಸೃಷ್ಟಿ, ಹುಲಿ ಸಂರಕ್ಷಿತಾ ಪ್ರದೇಶ ೋಷಣೆಯ ನೆಪದಲ್ಲಿ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವುದು ಹಾಗೂ ರೈತರನ್ನು ಸಂಕಷ್ಟಕ್ಕೆ ದೂಡುವುದು ಇದರ ಉದ್ದೇಶವಾಗಿದೆ. ಆಗಾಗಿ ಅರಣ್ಯದೊಳಗೆ ಜಾನುವಾರು ಮೇಯಿಸಲು ಯಾವುದೇ ನಿರ್ಬಂಧ ವಿಧಿಸಬಾರದು, ದನಗಳ ಮೇವಿಗೆ ಅರಣ್ಯ ಇಲಾಖೆಯವರು ಯಾವುದೇ ತೊಂದರೆ ಕೊಡಬಾರದು ಎಂಬ ಒತ್ತಾಯ ಕೇಳಿಬಂದಿದೆ. ಈ ನಿಟ್ಟಿನಲ್ಲಿ ರೈತರು, ರೈತ ಮುಖಂಡರು ಹಾಗೂ ಅರಣ್ಯವಾಸಿಗಳಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ.

*ಯಥಾಸ್ಥಿತಿ ಕಾಪಾಡುವುದು ಉತ್ತಮ

ನಾನು ಹಿಂದೆ ಹೆಚ್ಚು ದೇಶಿ ಹಸುಗಳನ್ನು ಸಾಕಾಣೆ ಮಾಡುತ್ತಿದ್ದೆ. ಈಗ 4 ಹಸುಗಳಿದ್ದು, ಹಿಂದಿನಿಂದಲೂ ಹಸುಗಳ ಮೇವಿಗೆ ಅರಣ್ಯವೇ ಆಧಾರವಾಗಿದೆ. ಈ ಭಾಗದ ರೈತರು ಹೆಚ್ಚು ಹಸುಗಳನ್ನು ಸಾಕಾಣೆ ಮಾಡುತ್ತಿದ್ದು, ಹೈನುಗಾರಿಕೆಯನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಆದರೆ ಅರಣ್ಯ ಸಚಿವರು ದನಕರುಗಳನ್ನು ಕಾಡಿನಲ್ಲಿ ಮೇಯಿಸಲು ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದರು. ಬಳಿಕ ಸ್ಥಳೀಯರಿಗೆ ಅವಕಾಶ ನೀಡಲಾಗುವುದು ಎಂದು ಆದೇಶಿಸಿದರು. ಈ ವಿಧವಾದ ಗೊಂದಲದ ನಡುವೆ ರೈತರು ಬಡವಾಗಲಿದ್ದಾರೆ. ಆಗಾಗಿ ಯಥಾಸ್ಥಿತಿ ಕಪಾಡಿಕೊಳ್ಳುವುದು ಉತ್ತಮ.

ವೇಲುಸ್ವಾಮಿ, ರೈತ, ಪುದು ರಾಮಾಪುರ, ಹನೂರು

*ಮುಕ್ತ ಅವಕಾಶ ನೀಡಬೇಕು

ಗಾಜನೂರು, ಕೊಪ್ಪ, ಮಿಣ್ಯಂ ಭಾಗದಲ್ಲಿ ಸುಮಾರು 7 ಸಾವಿರ ದೇಶಿ ಹಸುಗಳಿವೆ. ಈ ಹಿಂದೆ ರೈತರು ಅರಣ್ಯ ಪ್ರದೇಶದಲ್ಲೇ ಹಲವು ತಿಂಗಳು ಕಾಲ ದೊಡ್ಡಿಯನ್ನು ಹಾಕಿಕೊಂಡು ಹಸುಗಳನ್ನು ಮೇಯಿಸಲಾಗುತ್ತಿತ್ತು. ವನ್ಯಜೀವಿಗಳು ಹಾಗೂ ಅರಣ್ಯವೂ ಸಮೃದ್ಧಿಯಿಂದ ಕೂಡಿತ್ತು. ಅರಣ್ಯ ಇಲಾಖೆ ನಿಷೇಧ ಹೇರಿದ ಬಳಿಕ ಹಲವು ವರ್ಷಗಳಿಂದಲೂ ಹಸುಗಳು ಕಾಡಿನಲ್ಲಿ ಮೇವನ್ನು ಸೇವಿಸಿ ಮನೆಗೆ ಮರುಳುತ್ತಿವೆ. ಆದರೆ ಅರಣ್ಯ ಸಚಿವರ ಆದೇಶ ರೈತರಲ್ಲಿ ಆತಂಕವನ್ನು ಮೂಡಿಸಿತ್ತು. ಆದರೆ ಮತ್ತೆ ಆದೇಶ ಹಿಂಪಡೆದಿದ್ದಾರೆ ಎಂಬುದು ತಿಳಿಯಿತು. ಏನೇ ಆದರೂ ಕಾಡಿನಲ್ಲಿ ಹಸುಗಳನ್ನು ಮೇಯಿಸಲು ಮುಕ್ತ ಅವಕಾಶ ನೀಡಬೇಕು.

ನಾಗರಾಜು, ಅಧ್ಯಕ್ಷ, ಭಾರತೀಯ ಕಿಸಾನ್ ಸಂಘ, ಕೊಪ್ಪ ಘಟಕ, ಹನೂರು

*ಗೋಮಾಳ ಒತ್ತುವರಿ ತೆರವುಗೊಳಿಸಿ

ಅರಣ್ಯ ಇಲಾಖೆ ಹಸು-ಕರುಗಳಿಗೆ ನಿರ್ಬಂಧವನ್ನು ವಿಧಿಸುವ ಬದಲು, ಕಾಡಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರವನ್ನು ರೂಪಿಸಲಿ. ರೈತರು ಬೆಳೆದಿರುವ ಫಸಲುಗಳನ್ನು ನಾಶಮಾಡಿ, ಜಾನುವಾರುಗಳನ್ನು ಕೊಂದು ಹಾಕುತ್ತಿರುವುದಕ್ಕೆ ಕಡಿವಾಣ ಹಾಕಲಿ. ತಾಲೂಕಿನಲ್ಲಿ ಸಾವಿರಾರು ಎಕರೆ ಗೋಮಾಳ ಒತ್ತುವರಿಯಾಗಿದ್ದು, ತಾಲೂಕು ಆಡಳಿತ ಒತ್ತುವರಿ ತೆರವುಗೊಳಿಸುವುದಕ್ಕೆ ಮುಂದಾಗಬೇಕು. ಆಗ ಇಂತಹ ಸಮಸ್ಯೆಗಳು ಉಂಟಾಗುವುದಿಲ್ಲ.

ಎಸ್.ಪಿ.ಶಿವಪ್ರಕಾಶ್, ಜಿಲ್ಲಾಧ್ಯಕ್ಷ, ಭಾರತೀಯ ಕಿಸಾನ್ ಸಂಘ, ಗುಂಡ್ಲುಪೇಟೆ

*ಹೈನುಗಾರಿಕೆಯೇ ಆಧಾರ

ತಲೆ ತಲಾಂತರಗಳಿಂದಲೂ ಕಾಡಂಚಿನ ಗ್ರಾಮಗಳ ಜನರು ಕಾಡು ಪ್ರಾಣಿಗಳು ಹಾಗೂ ಕಾಡಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಬೇಸಿಗೆಯಲ್ಲಿ ಬೆಂಕಿಬಿದ್ದರೆ ಅದನ್ನು ನಂದಿಸಲು ಅರಣ್ಯ ಇಲಾಖೆಗೆ ಸಹಾಯ ಮಾಡುತ್ತಾ ಬಂದಿದ್ದಾರೆ. ವನ್ಯಜೀವಿಗಳ ಹಾವಳಿಯಿಂದ ರೈತರು ತಮ್ಮ ಜಮೀನುಗಳಲ್ಲಿ ಯಾವುದೇ ಬೆಳೆಗಳನ್ನು ಬೆಳೆಯಲಾಗದಂತಾಗಿದ್ದು, ಜೀವನೋಪಾಯಕ್ಕಾಗಿ ಹೈನುಗಾರಿಕೆ ಆಧಾರವಾಗಿದೆ. ಜಾನುವಾರುಗಳನ್ನು ಕಾಡಿಗೆ ಬಿಡದಿದ್ದರೆ ತುಂಬಾ ಸಮಸ್ಯೆ ಎದುರಿಸಬೇಕಾಗುತ್ತದೆ.

ಈಶಕುಮಾರ್, ಮಂಗಲ, ಗುಂಡ್ಲುಪೇಟೆ

*ರೈತರ ಬದುಕು ರೂಪಿಸಲಿ

ಬಹುಮುಖ್ಯವಾಗಿ ಅರಣ್ಯ ಇಲಾಖೆ ಕಾಡಂಚಿನ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರೊಂದಿಗೆ ಅನ್ಯೊನ್ಯತೆಯಿಂದ ನಡೆದುಕೊಳ್ಳಬೇಕು. ರೈತರ ಬೆಳೆಗಳನ್ನು ಕಾಡು ಪ್ರಾಣಿಗಳು ನಾಶ ಮಾಡುವುದನ್ನು ತಡೆಗಟ್ಟಬೇಕು. ಅದನ್ನು ಹೊರತುಪಡಿಸಿ ಜಾನುವಾರುಗಳನ್ನು ಕಾಡಿಗೆ ಬಿಡುವುದಿಲ್ಲ ಎಂಬುವುದು ಸರಿಯಲ್ಲ. ಹೈನುಗಾರಿಕೆಯನ್ನೇ ನಂಬಿಕೊಂಡಿರುವವರು ಇದರಿಂದ ಏನುಮಾಡಬೇಕು ಎಂಬ ಪ್ರಶ್ನೆ ಎದುರಾಗುತ್ತದೆ. ರೈತರ ಬದುಕು ರೂಪಿಸುವ ಯೋಜನೆಗಳು ಜಾರಿಯಾಗಲಿ ಹೊರತು ಬದುಕನ್ನು ಕಸಿಯುವುದು ಬೇಡ.

ಜಿ.ವಿ.ಮಹದೇವಸ್ವಾಮಿ, ರೈತ ಮುಖಂಡ, ಗೌಡಹಳ್ಳಿ

*ರೈತರಿಗೆ ಬಹಳ ತೊಂದರೆ

ಅರಣ್ಯ ಪ್ರದೇಶದೊಳಗೆ ಜಾನುವಾರುಗಳನ್ನು ಮೇಯಿಸಲು ನಿರ್ಬಂಧ ವಿಧಿಸುವ ಅರಣ್ಯ ಸಚಿವರ ಹೇಳಿಕೆ ಸರಿಯಲ್ಲ. ಪೂರ್ವಪರ ಆಲೋಚನೆ ಮಾಡದೇ ಏಕಾಏಕಿ ತೀರ್ಮಾನವನ್ನು ಸರ್ಕಾರ ಕೈಗೊಳ್ಳಬಾರದು. ಕಾಡಂಚಿನ ಗ್ರಾಮಗಳಲ್ಲಿರುವ ರೈತರಿಗೆ ವ್ಯವಸಾಯ, ಹೈನುಗಾರಿಕೆ ಪ್ರಧಾನವಾಗಿದೆ. ಜಾನುವಾರುಗಳನ್ನು ಮೇಯಿಸಲು ಕಾಡನ್ನೆ ಅವಲಂಬಿಸಿದ್ದಾರೆ. ಸರ್ಕಾರ ಇಂತಹ ಹೇಳಿಕೆ ನೀಡಿದರೆ ರೈತರಿಗೆ ಬಹಳ ತೊಂದರೆಯಾಗಲಿದೆ. ಹೊರ ರಾಜ್ಯದ ಜಾನುವಾರುಗಳಿಗೆ ನಿರ್ಬಂಧ ವಿಧಿಸಲಿ.

ನರಸಿಂಹನ್, ರೈತ ಮುಖಂಡ, ಕೊಳ್ಳೇಗಾಲ

*ರೈತ ವಿರೋಧಿ ಆದೇಶಗಳು ಬೇಕಿಲ್ಲ

ಅರಣ್ಯ ರಕ್ಷಣೆಗೆ ಕಾಡಂಚಿನ ಗ್ರಾಮದ ಜನರನ್ನೆ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ. ಆದರೆ, ಅವರ ಜಾನುವಾರುಗಳು ಕಾಡಿನಲ್ಲಿ ಮೇಯಬಾರದು ಎಂಬುದು ಯಾವ ನ್ಯಾಯ?. ಸರ್ಕಾರ ರೈತ ವಿರೋಧಿ ಆದೇಶವನ್ನು ಜಾರಿ ಮಾಡಕೂಡದು. ರೈತರ ಜಾನುವಾರುಗಳು ಕಾಡಿನಲ್ಲಿ ಮೇಯುವುದು ತಪ್ಪು ಎಂದರೆ ಕಾಡಿನೊಳಗೆ ಮಂತ್ರಿಗಳು, ಪ್ರಭಾವಿಗಳು, ರೆಸಾರ್ಟ್ ತೆರೆದು ಕಾಡು-ಪ್ರಾಣಿಗಳಿಗೆ ತೊಂದರೆ ನೀಡುತ್ತಿರುವುದಕ್ಕೆ ಸರ್ಕಾರ ಉತ್ತರಿಸಬೇಕು. ಅರಣ್ಯದೊಳಗೆ ಜಾನುವಾರು ಮೇಯಿಸಲು ನಿರ್ಬಂಧ ಹೇರಬಾರದು.

ನಂಜುಂಡಸ್ವಾಮಿ, ರೈತ ಮುಖಂಡ, ಕುಂತೂರು, ಕೊಳ್ಳೇಗಾಲ

*ಆದಿವಾಸಿಗಳಿಗೆ ತೊಂದರೆ

ಬಿಳಿಗಿರಿರಂಗನಬೆಟ್ಟದ ಅರಣ್ಯ ಪ್ರದೇಶದಲ್ಲಿ ವಾಸಿಸುವರು, ಇಲ್ಲಿಯವರೇ ಆಗಿದ್ದಾರೆ. ಅವರಿಗೆ ಕೃಷಿ ಮತ್ತು ಹೈನುಗಾರಿಕೆಯೇ ಪ್ರಧಾನವಾಗಿದೆ. ಅರಣ್ಯ ಪ್ರದೇಶಕ್ಕೆ ಜಾನುವಾರಗಳ ನಿಷೇಧ ಮಾಡಿರುವುದು ಸರಿಯಾದ ಕ್ರಮವಲ್ಲ. ಇದರಿಂದ ಅರಣ್ಯ ನಿವಾಸಿಗಳಿಗೆ, ಕಾಡಂಚಿನಲ್ಲಿ ವಾಸ ಮಾಡುತ್ತಿರುವ ಆದಿವಾಸಿಗಳಿಗೆ ಹಾಗೂ ರೈತಾಪಿ ವರ್ಗಕ್ಕೆ ತೊಂದರೆಯಾಗುತ್ತದೆ.

ರಂಗಮ್ಮ, ಗ್ರಾ.ಪಂ ಸದಸ್ಯೆ, ಬಿಳಿಗಿರಿರಂಗನ ಬೆಟ್ಟ