ಜಿಲ್ಲೆ

ದನ ಮೇಯಿಸಲು ತಡೆ, ರೈತರು ಹೋರಾಟದ ಕಡೆ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ರಾಜ್ಯದ ಎಲ್ಲ ಅರಣ್ಯ ಪ್ರದೇಶದೊಳಗೆ ಜಾನುವಾರುಗಳನ್ನು ಮೇಯಿಸಲು ಬಿಡುವುದಕ್ಕೆ ನಿಷೇಧ ಹೇರಲು ಅರಣ್ಯ ಸಚಿವ ಈಶ್ವರ ಖಂಡ್ರೆ ನೀಡಿರುವ ಸೂಚನೆಗೆ ಗಡಿಜಿಲ್ಲೆ ಚಾಮರಾಜನಗರದಲ್ಲಿ ವಿರೋಧ ವ್ಯಕ್ತವಾಗಿದ್ದು, ಹೋರಾಟ ನಡೆಸಲು ತೀರ್ಮಾನಿಸಲಾಗಿದೆ.

ಕಳೆದ ತಿಂಗಳು ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ಹಸು ಬೇಟೆಯಾಡಿದ ಪ್ರತೀಕಾರಕ್ಕೆ ಐದು ಹುಲಿಗಳಿಗೆ ವಿಷ ಹಾಕಿ ಕೊಲ್ಲಲಾಗಿತ್ತು.

ಈ ಪ್ರಕರಣ ನಡೆದಾಗ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ, ಉಳಿದ ರೈತರು ಸಾಕಿರುವ ದನಗಳು ಮೇಯಲು ಕಾಡಿಗೆ ಬಿಡುವುದನ್ನು ನಿಷೇಧಿಸಬೇಡಿ ಎಂದು ರೈತರು ಮನವಿ ಮಾಡಿದ್ದರು. ಹುಲಿಗಳ ಸಾವಿನ ಹಿಂದೆ ತಮಿಳುನಾಡು ಗೊಬ್ಬರ ಮಾಫಿಯಾ ಇದ್ದರೆ ತನಿಖೆ ನಡೆಸಬೇಕು. ಅಮಾಯಕ ರೈತರು ಮತ್ತು ಅವರು ಸಾಕಿರುವ ಜಾನುವಾರುಗಳಿಗೆ ತೊಂದರೆ ನೀಡಬಾರದು ಎಂದು ಆಗ್ರಹಿಸಿದ್ದರು.

ಇದೀಗ ಅರಣ್ಯ ಸಚಿವ ಈಶ್ವರ ಖಂಡ್ರೆ ರಾಜ್ಯದ ಅರಣ್ಯ ಸಚಿವ ಈಶ್ವರ ಖಂಡ್ರೆ ರಾಜ್ಯದ ಅರಣ್ಯ ಪ್ರದೇಶದೊಳಗೆ ದನ, ಕರು, ಮೇಕೆ, ಕುರಿ ಮೇಯಿಸುವುದನ್ನು ನಿಷೇಧಿಸಲು ಸೂಚನೆ ಹೊರಡಿಸಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ರೈತರು ಅರಣ್ಯ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ.

ವನ್ಯಜೀವಿಧಾಮದ ಅರಣ್ಯ ಕಚೇರಿಗೆ ಮುತ್ತಿಗೆ:

ಅರಣ್ಯದೊಳಗೆ ಜಾನುವಾರುಗಳು ಮೇಯಿಸಲು ನಿಷೇಧಿಸಿರುವುದನ್ನು ವಿರೋಧಿಸಿ ಜು.26ರಂದು ಕೊಳ್ಳೇಗಾಲದಲ್ಲಿರುವ ಮಲೆ ಮಹದೇಶ್ವರ ವನ್ಯಜೀವಿಧಾಮದ ಕಚೇರಿಗೆ ರೈತ ಸಂಘದ ಕಾರ್ಯಕರ್ತರು ಮುತ್ತಿಗೆ ಹಾಕಲು ಹೋರಾಟ ರೂಪಿಸಿದ್ದಾರೆ. ಶನಿವಾರ ಬೆಳಗ್ಗೆ ಕೊಳ್ಳೇಗಾಲದ ಬಸ್ ನಿಲ್ದಾಣದಿಂದ ಪ್ರತಿಭಟನಾ ರ‌್ಯಾಲಿ ಶುರುವಾಗಿ ಮಲೆ ಮಹದೇಶ್ವರ ವನ್ಯಜೀವಿಧಾಮದ ಕಚೇರಿ ತಲುಪಲಿದೆ. ರೈತ ನಾಯಕರು ಅರಣ್ಯ ಕಚೇರಿಗೆ ಮುತ್ತಿಗೆ ಹಾಕಲಿದ್ದಾರೆ. ಈ ಹೋರಾಟದಲ್ಲಿ ಎಲ್ಲ ರೈತರೂ ಭಾಗವಹಿಸಬೇಕೆಂದು ಸಂಘದ ರಾಜ್ಯ ಅಧ್ಯಕ್ಷೀಯ ಮಂಡಳಿ ಸದಸ್ಯ ಹೊನ್ನೂರು ಪ್ರಕಾಶ್ ಕರೆ ನೀಡಿದ್ದಾರೆ.

ಮೇವಿಗಾಗಿ ನಿಲ್ಲದ ಹೋರಾಟ:

ಕಾಡಂಚಿನ ಗ್ರಾಮಗಳಲ್ಲಿರುವ ರೈತರು ಜಾನುವಾರುಗಳ ಮೇವಿಗಾಗಿ ನಡೆಸುತ್ತಿರುವ ಹೋರಾಟಕ್ಕೆ ಸುದೀರ್ಘ ಇತಿಹಾಸವಿದೆ. ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಮೊದಲೆಲ್ಲ ದನದ ದೊಡ್ಡಿಗಳನ್ನು ಹಾಕಿಕೊಳ್ಳಲಾಗುತ್ತಿತ್ತು. ಅಂದರೆ, ಕಾಡಿನೊಳಗೆ ಒಂದು ಕಡೆ ದನಗಳ ಗುಂಪು ಹಾಕಿಕೊಂಡು ಸುತ್ತಮುತ್ತಲಿನ ಪ್ರದೇಶದಲ್ಲಿ ಮೇಯಿಸಲು ಬಿಡಲಾಗುತ್ತಿತ್ತು. ಇದಕ್ಕೆ ಅರಣ್ಯ ಇಲಾಖೆ ವಿರೋಧ ವ್ಯಕ್ತಪಡಿಸಿದಾಗ ರೈತರು ಹೋರಾಟ ನಡೆಸಿದ್ದರು. ದನದೊಡ್ಡಿ ಹಾಕಲು ನಿಷೇಧ ವಿಧಿಸಿದ ಬಳಿಕ ಕಾಡಂಚಿನ ಪ್ರದೇಶಗಳಲ್ಲಿ ಹಸು, ಕರು, ದನ, ಮೇಕೆ, ಕುರಿಗಳನ್ನು ಮೇಯಿಸಲಾಗುತ್ತಿತ್ತು. ಈಗ ಇದಕ್ಕೂ ತಡೆ ಬೀಳುತ್ತಿರುವುದರಿಂದ ಮತ್ತೆ ಹೋರಾಟ ಶುರುವಾಗುತ್ತಿದೆ.

ಜಾನುವಾರುಗಳ ಗತಿಯೇನು?

ಕಾಡಂಚಿನ ಗ್ರಾಮಗಳಲ್ಲಿರುವ ರೈತರು ಬೆಳೆಗಳನ್ನು ಬೆಳೆದು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವನ್ಯಪ್ರಾಣಿಗಳ ಉಪಟಳದಿಂದ ಬೆಳೆ ನಾಶವಾಗುತ್ತಿದೆ. ಮಳೆಯಾಶ್ರಿತ ಪ್ರದೇಶವಾಗಿರುವ ಗುಡ್ಡಗಾಡು ಪ್ರದೇಶಗಳಲ್ಲಿ ಕೃಷಿ ಮಾಡಲು ಸಾಧ್ಯವಾಗದ ರೈತರಿಗೆ ಜಾನುವಾರುಗಳಿಗೆ ಮೇವು ಬೆಳೆಯಲು ಮತ್ತು ಆರ್ಥಿಕ ಸಂಕಷ್ಟದಿಂದ ಮೇವು ಪೂರೈಸಲು ಸಾಧ್ಯವಾಗುತ್ತಿಲ್ಲ. ಈಗ ಏಕಾಏಕಿ ಜಾನುವಾರುಗಳನ್ನು ಕಾಡಿಗೆ ಬಿಡುವುದಕ್ಕೆ ನಿಷೇಧ ವಿಧಿಸಿದರೆ ಅವುಗಳ ಮೇವಿನ ಗತಿಯೇನು ಎನ್ನುವ ಪ್ರಶ್ನೆ ಮೂಡಿದೆ. ದನ ಸಾಕಾಣೆಯನ್ನೇ ಪ್ರಮುಖ ಉದ್ಯೋಗವನ್ನಾಗಿಸಿಕೊಂಡಿರುವ ರೈತರ ಬದುಕು ಹೇಗೆ ಎನ್ನುವ ಆತಂಕ ಮೂಡಿದೆ.

ತಲೆತಲಾಂತರದ ನಡೆದುಬಂದಿದೆ:

ಕಾಡಿನೊಳಗೆ ಮತ್ತು ಕಾಡಂಚಿನ ಗ್ರಾಮಗಳಲ್ಲಿ ವಾಸ ಮಾಡುವ ರೈತರು ಅರಣ್ಯದಲ್ಲಿ ಜಾನುವಾರು ಬಿಟ್ಟು ಮೇಯಿಸುವ ಕಾರ್ಯವನ್ನು ತಲೆ ತಲಾಂತರದಿಂದ ಮಾಡಿಕೊಂಡು ಬಂದಿದ್ದಾರೆ. ಕಾಡಿನೊಂದಿಗೆ ನಂಟು ಬೆಸೆದುಕೊಂಡಿರುವ ಕುಟುಂಬಗಳು ಜೀವನ ನಿರ್ವಹಣೆಗಾಗಿ ದನಗಳನ್ನು ಸಾಕುವುದು, ಇವುಗಳ ಮೇವಿಗಾಗಿ ಕಾಡನ್ನು ಆಶ್ರಯಿಸುವುದು ಸಾಮಾನ್ಯವಾಗಿತ್ತು. ಅರಣ್ಯ ಕಾನೂನಿನ ಅಡಿಯಲ್ಲಿ ಕಾಡಿನೊಳಗೆ ಸಾಕು ಪ್ರಾಣಿಗಳನ್ನು ಬಿಟ್ಟು ಮೇಯಿಸುವುದಕ್ಕೆ ಅವಕಾಶವಿಲ್ಲ. ಆದರೆ ಅರಣ್ಯ ಇಲಾಖೆ ಮತ್ತು ಸ್ಥಳೀಯರ ನಡುವಿನ ಬಾಂಧವ್ಯದಿಂದ ಜಾನುವಾರುಗಳನ್ನು ಮೇಯಿಸುವುದಕ್ಕೆ ಅಡ್ಡಿ ಆತಂಕಗಳಿರಲಿಲ್ಲ. ಅಲ್ಲದೇ, ಕಾಡಿನ ರಕ್ಷಣೆಯಲ್ಲಿ ಸ್ಥಳೀಯರ ಪಾತ್ರ ಪ್ರಧಾನವಾಗಿದೆ. ಕಾಡು ಮತ್ತು ವನ್ಯಜೀವಿಗಳನ್ನು ಉಳಿಸುವುದರೊಂದಿಗೆ ಸ್ಥಳೀಯರು ಜೀವಿಸಲು ಅವಕಾಶಗಳನ್ನು ನೀಡಬೇಕಾಗಿದೆ.

ಗಮನ ಸೆಳೆದಿದ್ದ ವರದಿ:

ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ವಿಷ ಪ್ರಾಶನದಿಂದ ಐದು ಹುಲಿಗಳು ಮೃತಪಟ್ಟ ಪ್ರಕರಣ ನಡೆದ ಬೆನ್ನಲ್ಲೇ ವಿಜಯವಾಣಿ ದಿನಪತ್ರಿಕೆಯಲ್ಲಿ ಜೂ. 28ರಂದು ‘ದನಗಳ ಕಾಡು ಪ್ರವೇಶಕ್ಕೆ ಬೀಳುತ್ತಾ ತಡೆ’? ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಹುಲಿಗಳು ಮೃತಪಟ್ಟ ಅರಣ್ಯದ ಸುತ್ತಮುತ್ತಲ ಪ್ರದೇಶದಲ್ಲಿ ದನಗಾಹಿಗಳು ಸುಳಿದಿರಲಿಲ್ಲ. ದನಗಳನ್ನು ಮೇಯಿಸಲು ಹೋಗುತ್ತಿರಲಿಲ್ಲ. ಅಲ್ಲದೇ, ಮಲೆ ಮಹದೇಶ್ವರ ವನ್ಯಜೀವಿಧಾಮದ ಬೇರೆ ಪ್ರದೇಶಗಳಲ್ಲಿ ದನಗಳನ್ನು ಮೇಯಿಸಲು ತಡೆ ಬೀಳಬಹುದು ಎಂಬ ಆತಂಕ ಶುರುವಾಗಿತ್ತು. ಅಂತೆಯೇ ಅರಣ್ಯ ಸಚಿವ ಈಶ್ವರ ಖಂಡ್ರೆ ಇದೀಗ ಸೂಚನೆಯನ್ನು ಹೊರಡಿಸಿದ್ದಾರೆ.

ಪರ್ಯಾಯ ವ್ಯವಸ್ಥೆ ಕಲ್ಪಿಸದೆ ತೊಂದರೆ: ಕಾಡಿಗೆ ಜಾನುವಾರುಗಳನ್ನು ಮೇಯಿಸಲು ನಿಷೇಧ ವಿಧಿಸುವ ಮುನ್ನ ಕಾಡಂಚಿನ ಗ್ರಾಮಗಳ ಜನರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕಾಗಿದೆ. ಅರಣ್ಯ ಇಲಾಖೆ ವತಿಯಿಂದ ಟಿವಿಎಸ್ ಕಂಪನಿಯ ಅಂಗಸಂಸ್ಥೆ ಶ್ರೀನಿವಾಸನ್ ಸರ್ವೀಸಸ್ ಟ್ರಸ್ಟ್ ಕುತ್ತುಗಳಿ, ಗೊಲ್ಲರದಿಂಬದ 10 ರೈತರಿಗೆ ಉಚಿತವಾಗಿ ಹೈಬ್ರಿಡ್ ಹಸುಗನ್ನು ವಿತರಣೆ ಮಾಡಿದ್ದರು. ದನಗಳನ್ನು ಸಾಕುವ ಬದಲು ಹಾಲು ಕೊಡುವ ಹಸು ಸಾಕಿ ಹೈನುಗಾರಿಕೆ ಮಾಡಲು ಅರಣ್ಯ ಇಲಾಖೆ ಪ್ರೋತ್ಸಾಹ ನೀಡುವುದಾಗಿ ತಿಳಿಸಿತ್ತು. ಈ ರೀತಿ ಇನ್ನಿತರೆ ವ್ಯವಸ್ಥೆಗಳನ್ನು ಕಲ್ಪಿಸಿ ಕೊಡದೆ ಅಥವಾ ಪರ್ಯಾಯ ಸೌಲಭ್ಯ ನೀಡದೆ ಏಕಾಏಕಿ ದನಗಳನ್ನು ಕಾಡಿಗೆ ಬಿಡುವುದನ್ನು ನಿಷೇಧಿಸಿದರೆ ಹೇಗೆ ಎಂಬ ಪ್ರಶ್ನೆ ಮೂಡಿದೆ.

ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲ ಪ್ರದೇಶಗಳಲ್ಲಿ ದೇಸಿ ತಳಿಯ ಜಾನುವಾರುಗಳಿವೆ. ಇವುಗಳ ಸಾಕಾಣೆಯನ್ನೇ ಪ್ರಮುಖ ಕಾಯಕವನ್ನಾಗಿ ಮಾಡಿಕೊಂಡು ರೈತರು ಜೀವನ ನಡೆಸುತ್ತಿದ್ದಾರೆ. ಜಾನುವಾರುಗಳನ್ನು ಮೇಯಿಸಲು ದಟ್ಟ ಕಾಡಿನೊಳಗೆ ಬಿಡುವುದು ಬೇಡ. ಕಾಡಂಚಿನಲ್ಲೇ ಪ್ರದೇಶ ನಿಗದಿ ಪಡಿಸಿ ಅಲ್ಲಿ ಜಾನುವಾರುಗಳನ್ನು ಮೇಯಿಸಲು ಬಿಡಬೇಕು. ಡಾ.ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಪೀಠಾಧಿಪತಿ, ಸಾಲೂರು ಬೃಹನ್ಮಠ, ಮಹದೇಶ್ವರ ಬೆಟ್ಟ ಅರಣ್ಯದೊಳಗೆ ಜಾನುವಾರು ಮೇಯಿಸಲು ನಿಷೇಧ ವಿಧಿಸಿರುವುದನ್ನು ಖಂಡಿಸಿ ಜು.26ರಂದು ಕೊಳ್ಳೇಗಾಲದಲ್ಲಿರುವ ಮಲೆ ಮಹದೇಶ್ವರ ವನ್ಯಜೀವಿಧಾಮ ಕಚೇರಿಗೆ ಮುತ್ತಿಗೆ ಹಾಕುತ್ತೇವೆ. ಹುಲಿಗಳ ಸಾವಿನ ಪ್ರಕರಣದಲ್ಲಿ ರಾಜೀನಾಮೆ ನೀಡದ ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶ ಹೊರಡಿಸುವ ನೈತಿಕತೆ ಇಲ್ಲ. ರೈತ ಮತ್ತು ಕಾಡು ಬೇರೆಯಲ್ಲ. ಬೆಂಗಳೂರಿನಲ್ಲಿರುವ ಪರಿಸರವಾದಿಗಳು ಇಲ್ಲಿ ಬಂದು ರೈತರು ಇರುವ ಕಡೆ ವಾಸ ಮಾಡಲಿ. ಅರಣ್ಯ ಸಚಿವ, ಅಧಿಕಾರಿಗಳು ಮತ್ತು ಪರಿಸರವಾದಿಗಳಿಂದಲೇ ಸಮಸ್ಯೆಯಾಗುತ್ತಿದೆಯೇ ಹೊರತು ನಿಜವಾದ ರೈತರಿಂದಲಲ್ಲ. ಹೊನ್ನೂರು ಪ್ರಕಾಶ್, ರೈತ ಮುಖಂಡ, ಚಾಮರಾಜನಗರ ಅರಣ್ಯದೊಳಗೆ ದನಗಳನ್ನು ಮೇಯಿಸಲು ನಿಷೇಧ ವಿಧಿಸಿರುವುದನ್ನು ಹಿಂದಕ್ಕೆ ತೆಗೆದುಕೊಳ್ಳಲ್ಲ ಎನಿಸುತ್ತಿದೆ. ಜಾನುವಾರುಗಳಿಗೆ ಬೇರೆ ವ್ಯವಸ್ಥೆ ಕಲ್ಪಿಸಬೇಕಿದೆ. ಈ ಹಿನ್ನೆಲೆಯಲ್ಲಿ ಪರಿಹಾರ ಕಂಡುಕೊಳ್ಳಲು ಸಭೆ ಮಾಡುತ್ತೇನೆ. ಎಂ.ಆರ್.ಮಂಜುನಾಥ್, ಶಾಸಕ, ಹನೂರು ನಿಯಮಾವಳಿ ಪ್ರಕಾರ ಕಾನೂನು ಜಾರಿಗೆ ತರಬೇಕು. ಈ ಸಂಬಂಧ ಸಿಸಿಎ್ ಅವರೊಂದಿಗೆ ಚರ್ಚೆ ಮಾಡಲಾಗಿದೆ. ಜಿಲ್ಲಾಡಳಿತ, ಪಶು ಸಂಗೋಪನಾ ಇಲಾಖೆ ಸಹಕಾರದೊಂದಿಗೆ ಆದೇಶವನ್ನು ಪಾಲನೆ ಮಾಡಲು ಕ್ರಮವಹಿಸುತ್ತೇವೆ. ಭಾಸ್ಕರ್,ಡಿಸಿಎ್, ಮಲೆ ಮಹದೇಶ್ವರ ವನ್ಯಜೀವಿಧಾಮ, ಕೊಳ್ಳೇಗಾಲ