ಬೆಳಗಾವಿ: ಇಂದಿನ ತಂತ್ರಜ್ಞಾನ ಯುಗದಲ್ಲಿ ಜೀವನ ಶೈಲಿ ಬದಲಾದಂತೆ ಅದೆಷ್ಟೋ ಕುಟುಂಬಗಳು ಸಂತಾನದಿಂದ ವಂಚಿತವಾಗುತ್ತಿವೆ. ವಂಶವಾಹಿನಿ ಮುಂದುವರಿಸಲು ಮಕ್ಕಳು ಇಲ್ಲದ್ದರಿಂದ ದತ್ತು ಪಡೆಯುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಲಿದೆ. ಬೆಳಗಾವಿ ಜಿಲ್ಲೆಯೊಂದರಲ್ಲೇ 112 ಅನಾಥ ಮಕ್ಕಳು ಅನ್ಯ ಕುಟುಂಬಗಳ ಪಾಲನೆ-ಪೋಷಣೆಗೆ ಒಳಪಟ್ಟಿದ್ದು, ತಂದೆ-ತಾಯಿ ಇಲ್ಲ ಎಂಬ ಕೊರಗು ನೀಗಿಸಿಕೊಂಡಿದ್ದಾರೆ.
ಪ್ರತಿವರ್ಷವೂ 200 ಅರ್ಜಿ: ಅನಾಥರು, ನಿರ್ಗತಿಕರೇ ಆಗಿದ್ದರೂ ಅವರಿಗೂ ಜೀವನ ಇರುತ್ತದೆ. ಆದರೆ, ಸಾಂತ್ವನ ಕೇಂದ್ರದಲ್ಲಿ ಸೀಮಿತ ಚೌಕಟ್ಟಿನಲ್ಲಿ ದಿನ ಕಳೆಯುತ್ತಿರುವ ಅಂತಹ ಮಕ್ಕಳನ್ನು ಈಗ ಕಾನೂನಾತ್ಮಕವಾಗಿ ದತ್ತು ಪಡೆಯಬಹುದಾಗಿದೆ. ಮದುವೆಯಾಗಿ ಅನೇಕ ವರ್ಷ ಕಳೆದರೂ ಸಂತಾನ ಭಾಗ್ಯ ಇಲ್ಲದೆ ಕೊರಗುವ ಅದೆಷ್ಟೋ ಕುಟುಂಬಗಳು ಈಗ ಮಕ್ಕಳನ್ನು ದತ್ತು ಪಡೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ದತ್ತು ಸ್ವೀಕರಿಸುವವರ ಸಂಖ್ಯೆ ಹೆಚ್ಚಾಗಿದ್ದು, ಆನ್‌ಲೈನ್ ಮೂಲಕ ಪ್ರತಿವರ್ಷವೂ 200ಕ್ಕೂ ಅಧಿಕ ಅರ್ಜಿ ಸಲ್ಲಿಕೆಯಾಗುತ್ತಿವೆ.
ದಂಪತಿಗೆ ಕೊರಗು: ಬಂಜೆತನ, ಸಕಾಲದಲ್ಲಿ ಮಕ್ಕಳನ್ನು ಹೊಂದಲು ಯುವ ದಂಪತಿಯಲ್ಲಿ ನಿರಾಸಕ್ತಿ, ಆಕಸ್ಮಿಕ ಅಪಘಾತಗಳಲ್ಲಿ ಇರುವ ಒಂದೇ ಮಗುವನ್ನು ಕಳೆದುಕೊಂಡ ದಂಪತಿ ಮಕ್ಕಳಿಲ್ಲದೆ ಕೊರಗುತ್ತಿರುತ್ತಾರೆ. ಹೀಗಾಗಿ ಮಗುವೊಂದನ್ನು ದತ್ತು ಪಡೆಯಲು ಅರ್ಜಿ ಸಲ್ಲಿಸುತ್ತಾರೆ. ಹೀಗೆ ಅರ್ಜಿ ಸಲ್ಲಿಸುವವರ ಪೈಕಿ ಶ್ರೀಮಂತರು ಹಾಗೂ ಅನಿವಾಸಿ ಭಾರತೀಯರೇ ಹೆಚ್ಚಿರುತ್ತಾರೆ.
ಬೆಳಗಾವಿ ನಗರದಲ್ಲಿರುವ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನ ಮಕ್ಕಳ ದತ್ತು ಕೇಂದ್ರದ ವತಿಯಿಂದ ಈವರೆಗೆ 112 ಮಕ್ಕಳನ್ನು ದತ್ತು ನೀಡಲಾಗಿದೆ. ಇದರಲ್ಲಿ 107 ಮಕ್ಕಳು ಸ್ವದೇಶಿ ಹಾಗೂ 5 ಮಕ್ಕಳು ವಿದೇಶಕ್ಕೆ ದತ್ತು ನೀಡಲಾಗಿದೆ. 2008ರಿಂದ 2020ರ ವರೆಗೆ ದೇಶೀಯವಾಗಿ ದತ್ತು ಪೂರ್ವ 98, ಆದೇಶ ಪಡೆದ 96 ಮಕ್ಕಳು ಹಾಗೂ ವಿದೇಶಕ್ಕೆ 3 ಮಕ್ಕಳನ್ನು ದತ್ತು ನೀಡಲಾಗಿದೆ. 2020-21ರಲ್ಲಿ ದೇಶೀಯವಾಗಿ ದತ್ತು ಪೂರ್ವ 9, ಆದೇಶ ಪಡೆದ 11 ಮಕ್ಕಳು ಹಾಗೂ ವಿದೇಶಕ್ಕೆ 2 ಮಕ್ಕಳನ್ನು ದತ್ತು ನೀಡಲಾಗಿದೆ. ಸದ್ಯ ಸಂಸ್ಥೆಯಲ್ಲಿ 8 ಗಂಡು. 7 ಹೆಣ್ಣು ಮಕ್ಕಳು ದತ್ತು ನಿರೀಕ್ಷೆಯಲ್ಲಿದ್ದಾರೆ. ಕೋರ್ಟ್‌ನಲ್ಲಿ 2 ಮಕ್ಕಳ ದತ್ತು ಆದೇಶ ಬಾಕಿ ಇದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ತಿಳಿಸಿದ್ದಾರೆ.
ಬೆಳಗಾವಿಯ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನ ಮಕ್ಕಳ ದತ್ತು ಕೇಂದ್ರದ ವತಿಯಿಂದ ದೇಶದ ವಿವಿಧ ಭಾಗಗಳಿಗೆ 27 ಮಕ್ಕಳು ಹಾಗೂ ಅಮೆರಿಕ, ಆಸ್ಟ್ರೇಲಿಯಾ, ದುಬೈ ದೇಶಗಳಿಗೆ 4 ಮಕ್ಕಳನ್ನು ದತ್ತು ನೀಡಿದ್ದೇವೆ. ಇನ್ನೊಂದು ಕೋರ್ಟ್‌ನಲ್ಲಿ ಬಾಕಿ ಇದೆ. ಮಕ್ಕಳ ಪಡೆಯಲು ಪಾಲಕರು ಅರ್ಜಿ ಹಾಕಿ 2ರಿಂದ 3 ವರ್ಷ ಕಾಯುತ್ತಾರೆ. ವರ್ಷದಿಂದ ವರ್ಷಕ್ಕೆ ಮಕ್ಕಳ ದತ್ತು ಪಡೆಯಲು ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಳವಾಗುತ್ತಿದೆ.| ರವೀಂದ್ರ ರತ್ನಾಕರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಬೆಳಗಾವಿ
| ಮಂಜುನಾಥ ಕೋಳಿಗುಡ್ಡ ಬೆಳಗಾವಿ