ಜಿಲ್ಲೆ

ದತ್ತು ಕೊಡುವ ಪ್ರಕ್ರಿಯೆಯಲ್ಲಿ ನ್ಯಾಯ ಪರಿಪಾಲಿಸಿ

ಚಾಮರಾಜನಗರ: ಕಾನೂನಿನ ಮೂಲಕವೇ ಮಕ್ಕಳನ್ನು ದತ್ತು ಪಡೆಯುವುದು ಅಗತ್ಯವಾಗಿದ್ದು, ದತ್ತು ಕೊಡುವ ಪ್ರಕ್ರಿಯೆಯಲ್ಲಿ ನ್ಯಾಯ ಪರಿಪಾಲಿಸಿ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್ ಅಭಿಪ್ರಾಯಪಟ್ಟರು.

ತಾಲೂಕಿನ ಮರಿಯಾಲದಲ್ಲಿರುವ ಬಸವರಾಜೇಂದ್ರ ನರ್ಸಿಂಗ್ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಬಸವರಾಜೇಂದ್ರ ಮೆಡಿಕಲ್ ಟ್ರಸ್ಟ್ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ದತ್ತು ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬರು ತಂದೆ, ತಾಯಿ, ಅಣ್ಣ, ತಮ್ಮಂದಿರ ಪ್ರೀತಿ, ವಾತ್ಸಲ್ಯದಲ್ಲಿ ಬದುಕುತ್ತೇವೆ. ಕಷ್ಟ ಸುಖ ಹಂಚಿಕೊಂಡು ಜೀವನ ಸಾಗಿಸುವ ತೆಗೆ ಶಿಕ್ಷಣ ಪಡೆಯುತ್ತೇವೆ. ದುರ್ಬಲ ಮಕ್ಕಳಿಗೂ ಹಕ್ಕು ಸಿಗಬೇಕು ಎಂಬುದು ಕಾನೂನಿನಲ್ಲಿದೆ. ದತ್ತು ಕೊಡುವ ಪ್ರಕ್ರಿಯೆಯಲ್ಲಿ ನ್ಯಾಯ ಪರಿಪಾಲಿಸಬೇಕು ಎಂದರು. ಯಾವುದೇ ಮಗು ಸಿಕ್ಕಾಗ ಪಾಲನೆ, ಪೋಷಣೆ ಮಾಡುತ್ತಾರೆ ಎಂದು ಕೇಳಿದವರಿಗೆ ಏಕಾಏಕಿ ಕೊಡಬಾರದು. ಮಗುವಿನ ಭವಿಷ್ಯ ಬಹಳ ಮುಖ್ಯವಾಗುತ್ತದೆ. ಕಾನೂನಿನ ನಿಯಮಗಳಡಿ ಮಗುವನ್ನು ದತ್ತು ಕೊಡಬೇಕು. ಅನಾಥ ಮಗು ಸಿಕ್ಕಾಗ ಕೂಡಲೇ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಸರಸ್ವತಿ ಮಾತನಾಡಿ, ಅನಾಥ ಮಗು ಸಿಕ್ಕಾಗ ಆ ಮಗುವಿನ ತಂದೆ, ತಾಯಿಯನ್ನು ಪತ್ತೆ ಮಾಡಬೇಕು. 60 ದಿನ ಕಾಲ ಮಗು ದತ್ತು ಕೇಂದ್ರದಲ್ಲಿರಲಿದೆ. ಅಲ್ಲಿಯ ತನಕ ಪತ್ರಿಕೆ, ಸಾಮಾಜಿಕ ಜಾಲತಾಣಗಳಲ್ಲಿ ಮಗುವಿನ ಪೋಷಕರ ಪತ್ತೆಗೆ ಜಾಹೀರಾತು ನೀಡಲಾಗುವುದು. ಒಂದು ವೇಳೆ 60 ದಿನಗಳ ತನಕ ಮಗುವಿನ ತಂದೆ, ತಾಯಿ ಸಿಗದಿದ್ದಾಗ ಬೇರೆಯವರಿಗೆ ದತ್ತು ಕೊಡಲು ನಿರ್ಧರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಬಸವರಾಜೇಂದ್ರ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಬಸವರಾಜೇಂದ್ರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎನ್.ಚಲುವರಾಜು, ಡಾ.ಶ್ವೇತಾ ಶಶಿಧರ್, ನದಿಯಾ ಜೋನಾಥನ್, ಕುಮಾರ್, ಆನಂದ್, ಮಂಜಪ್ಪ ಹಾಗೂ ಇತರರು ಹಾಜರಿದ್ದರು.