ಜಿಲ್ಲೆ

ದತ್ತಾಂಶದ ನೆಪ ರಾಜಕೀಯ ನಾಟಕ

ಚಿತ್ರದುರ್ಗ: ನಾಗಮೋಹನದಾಸ್ ವರದಿಯ ಅವಶ್ಯಕತೆ ಇಲ್ಲ. ಒಳ ಮೀಸಲಾತಿ ಜಾರಿಗೊಳಿಸುವ ಅಧಿಕಾರ ಆಯಾ ರಾಜ್ಯ ಸರ್ಕಾರಕ್ಕಿದೆ ಎಂಬ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದ್ದರೂ ದತ್ತಾಂಶದ ನೆಪ ಹೇಳುತ್ತಿರುವುದು ರಾಜಕೀಯ ನಾಟಕ ಎಂದು ಚಿಂತಕ ಜೆ.ಯಾದವರೆಡ್ಡಿ ಆರೋಪಿಸಿದರು.

ಕ್ರೀಡಾ ಭವನದಲ್ಲಿ ಮಾದಿಗ ಮಹಾಸಭಾ, ಲಂಕೇಶ್ ವಿಚಾರ ವೇದಿಕೆ, ಬೀಕೆ-ಕೇಬಿ ಬಳಗದಿಂದ ನಿ.ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗ ಸಾಧ್ಯತೆ-ಸವಾಲು ಕುರಿತು ಭಾನುವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿದರು.

ಕರ್ನಾಟಕದಲ್ಲಿ ಶೇ. 73ರಷ್ಟು ಮೀಸಲಾತಿ ಮಹಾರಾಜರು ನೀಡಿದ್ದರು. ಸದಾಶಿವ, ಕಾಂತರಾಜ್ ಆಯೋಗದ ವರದಿಗಳ ವಿರುದ್ಧವೂ ಅಪಸ್ವರ ಕೇಳಿಬರುತ್ತಿವೆ. ಮೀಸಲಾತಿ ಒಪ್ಪಿಕೊಳ್ಳುವವರು ಒಳಮೀಸಲಿಗೆ ವಿರೋಧಿಸುವುದು ಸಲ್ಲದು. ಇದು ಸಂವಿಧಾನಶಿಲ್ಪಿ ಡಾ.ಬಿ.ಅಂಬೇಡ್ಕರ್ ಆಶಯಗಳಿಗೆ ದ್ರೋಹ ಎಸಗಿದಂತೆ ಎಂದು ಅಭಿಪ್ರಾಯಪಟ್ಟರು.

ರಾಜಕೀಯ ಒತ್ತಡಕ್ಕೆ ಮಣಿದಿರುವ ಸಿಎಂ ಸಿದ್ದರಾಮಯ್ಯ ಸದಾಶಿವ ಆಯೋಗದ ವರದಿ ಆಧರಿಸಿ, ಒಳ ಮೀಸಲಾತಿ ಜಾರಿ ಮಾಡಬಹುದು. 1901ರಿಂದ ಈವರೆಗೂ ನೀಡಿರುವ ಎಲ್ಲ ಆಯೋಗದ ವರದಿಗಳು ಸುಪ್ರೀಂ ಕೋರ್ಟ್‌ಗಿಂತ ದೊಡ್ಡದಲ್ಲ ಎಂದರು.

ವಿಶ್ಲೇಷಕ ಕೋಡಿಹಳ್ಳಿ ಸಂತೋಷ್ ಮಾತನಾಡಿ, ರಾಜ್ಯ ಸರ್ಕಾರ ಒಳ ಮೀಸಲು ಜಾರಿಗೆ ಮೀನಾಮೇಷ ಎಣಿಸುತ್ತಿದೆ. ಇಷ್ಟವಿಲ್ಲದಿದ್ದರೆ, ಮತ್ತೆ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಿ. ಆದರೆ, ಮೂರ‌್ನಾಲ್ಕು ದಶಕದಿಂದಲೂ ಹೋರಾಟ ನಡೆಸುತ್ತಿರುವ ಮಾದಿಗ ಸಮುದಾಯ ಒಂಟಿಯಲ್ಲ. ಅನುಷ್ಠಾನ ಆಗುವವರೆಗೂ ಹೋರಾಟ ನಿಲ್ಲದು ಎಂದು ಸವಾಲು ಹಾಕಿದರು.

ತುಮಕೂರು ವಿವಿ ಪ್ರಾಧ್ಯಾಪಕ ಡಾ.ನಾಗಭೂಷಣ ಬಗ್ಗನಡು ಮಾತನಾಡಿ, ಈ ವಿಚಾರದಲ್ಲಿ ಸಿಎಂ ಜಾಣ ನಡೆ ಪ್ರದರ್ಶಿಸುತ್ತಿದ್ದಾರೆ. 75 ವರ್ಷ ಮೀಸಲಾತಿ ಉಂಡವರು ಒಳಮೀಸಲು ಕುರಿತು ಏಕೆ ಧ್ವನಿ ಎತ್ತುತ್ತಿಲ್ಲ?. ಅಂಬೇಡ್ಕರ್ ಅವರ ಆಶಯ, ಚಿಂತನೆ ಮರೆತಿದ್ದಾರೆಯೇ ಎಂದು ಪ್ರಶ್ನಿಸಿದರು.

ಚಿಂತಕ ಬೆಂಗಳೂರಿನ ಶಿವಸುಂದರ್, ಪತ್ರಕರ್ತ ಎಂ.ಎನ್.ಅಹೋಬಲಪತಿ, ಲಂಕೇಶ್ ವಿಚಾರ ವೇದಿಕೆ ಸಂಚಾಲಕ ಜಡೆಕುಂಟೆ ಮಂಜುನಾಥ್, ಮುಖಂಡರಾದ ಬಿ.ಪಿ.ಪ್ರಕಾಶ್‌ಮೂರ್ತಿ, ಹುಲ್ಲೂರು ಕುಮಾರ್, ಕೊಟ್ಟಶಂಕರ್, ಪ್ರೊ.ಮಲ್ಲಿಕಾರ್ಜುನ್ ಆರ್.ಹಲಸಂಗಿ, ಬಿ.ಎಂ.ನಿರಂಜನ್, ಎಂ.ಆರ್.ಶಿವರಾಜ್, ಜಿಪಂ ಮಾಜಿ ಸದಸ್ಯ ಆರ್.ನರಸಿಂಹರಾಜು ಇತರರಿದ್ದರು.