ಚಿಕ್ಕಮಗಳೂರು: ಶ್ರೀ ಗುರು ದತ್ತಾತ್ರೇಯ ಪೀಠದ ಗರ್ಭಗುಡಿಯ ದ್ವಾರ ಬಾಗಿಲಿನಲ್ಲಿ ಬರೆದಿರುವ ಉರ್ದು ಫಲಕ ತೆರವುಗೊಳಿಸಿ, ಕನ್ನಡದಲ್ಲಿ ಫಲಕ ಅಳವಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಪದಾಧಿಕಾರಿಗಳು ಶುಕ್ರವಾರ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಸೇನೆಯ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ವಾಣಿ, ಶ್ರೀ ಗುರು ದತ್ತಾತ್ರೇಯರ ಪುಣ್ಯ ಸ್ಥಳವಾದ ಪೀಠದಲ್ಲಿ ಕನ್ನಡ ಫಲಕ ಅಳವಡಿಸುವ ಬದಲು ಉರ್ದುವಿನಲ್ಲಿ ಅಳವಡಿಸಿರುವುದು ಸರಿಯಲ್ಲ. ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದಿದ್ದಲ್ಲಿ ಫಲಕಕ್ಕೆ ಮಸಿ ಬಳಿದು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿರಬೇಕು ಎಂಬ ನಿಟ್ಟಿನಲ್ಲಿ ಪ್ರತಿಯೊಂದು ಅಂಗಡಿ ಮುಂಗಟ್ಟುಗಳಲ್ಲಿ ಶೇ. ೬೦ರಷ್ಟು ಕನ್ನಡ ಬಳಕೆ ಕಡ್ಡಾಯಗೊಳಿಸಿ ಸರ್ಕಾರ ಆದೇಶಿಸಿದೆ. ಆದರೆ ದತ್ತಪೀಠದ ದೇವಸ್ಥಾನ ಸರ್ಕಾರದ ಅಧೀನದಲ್ಲಿದ್ದರೂ ಉರ್ದುವಿನಲ್ಲಿ ಫಲಕ ಹಾಕಿ ಕನ್ನಡಿಗರಿಗೆ ಅವಮಾನಿಸಲಾಗುತ್ತಿದೆ ಎಂದು ದೂರಿದರು.
ಶ್ರೀ ಗುರುದತ್ತಾತ್ರೇಯ ಪೀಠವು ಸಮಸ್ತ ಕನ್ನಡಿಗರ ಆಸ್ತಿ. ಪ್ರತಿದಿನ ಸಾವಿರಾರು ಭಕ್ತರು ಕುಟುಂಬ ಸಮೇತ ದರ್ಶನಕ್ಕೆ ಬರುತ್ತಾರೆ. ಅವರೆಲ್ಲರ ಮಾತೃಭಾಷೆ ಕನ್ನಡವೇ ಆಗಿರುತ್ತದೆ. ರಾಜ್ಯದಲ್ಲಿ ಜನಿಸಿ ಕನ್ನ ಡ ಬರುವುದಿಲ್ಲ, ನಾವು ಉರ್ದುವನ್ನು ಪ್ರೀತಿಸುತ್ತೇವೆ ಎನ್ನುವವರನ್ನು ಓಲೈಸಲು ಸರ್ಕಾರ ಮತ್ತು ಜಿಲ್ಲಾಡಳಿತ ನಾಡದ್ರೋಹ ಕೆಲಸಕ್ಕೆ ಕೈಜೋಡಿಸುತ್ತಿದೆ ಎಂದು ಆಪಾದಿಸಿದರು.
ಕನ್ನಡಿಗರ ಶ್ರದ್ದಾಭಕ್ತಿಯ ಪವಿತ್ರ ಕೇಂದ್ರ ಹಾಗೂ ದತ್ತಾತ್ರೇಯರು ತಪಸ್ಸು ಮಾಡಿದ ಚಂದ್ರದ್ರೋಣ ಪರ್ವತ ಸಾಲಿನ ಶ್ರೀ ಗುರು ದತ್ತಾತ್ರೇಯರು ಪುಣ್ಯಸ್ಥಳಕ್ಕೆ ನಾಡಿನ ಭಕ್ತಾಧಿಗಳು, ಪ್ರವಾಸಿಗರಿಗೆ ದ್ವಾರ ಬಾಗಿನ ಮೇಲೆ ಬರೆದಿರುವ ಉರ್ದುಭಾಷೆ ಅರ್ಥವಾಗುತ್ತಿಲ್ಲ. ಹೀಗಾಗಿ ಸಮಸ್ತ ಕನ್ನಡಿಗರಿಗೆ ಅರ್ಥವಾಗುವಂತೆ ಕನ್ನಡದಲ್ಲೇ ಫಲಕ ಹಾಕಬೇಕು ಎಂದರು.
ಅಪ್ಪಟ ಕನ್ನಡಿಗರಿರುವ ನಾಡಿನಲ್ಲಿ ಪ್ರತಿಯೊಂದು ಕಡೆಗಳಲ್ಲೂ ಎಲ್ಲಾ ರೀತಿಯ ಜಾತಿ, ಧರ್ಮವರು ಕನ್ನಡವನ್ನು ಪೂಜಿಸಿ, ಪ್ರೀತಿಸಬೇಕು. ಅದರಂತೆ ದತ್ತಪೀಠದ ಗರ್ಭಗುಡಿಯ ದ್ವಾರ ಬಾಗಿಲಿನ ಮೇಲೆ ಕನ್ನಡವೇ ಸಾರ್ವಭೌಮವಾಗಿ ಮೆರೆಯಬೇಕು. ಧರ್ಮದ ಹೆಸರಿನಲ್ಲಿ ಕನ್ನಡ ಭಾಷೆಯ ಮೇಲೆ ಸವಾರಿ ಮಾಡಲು ಮುಂದಾದರೆ ಸೇನೆ ಎಂದಿಗೂ ಸಹಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
ಸೇನೆಯ ಜಿಲ್ಲಾಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿ, ಜಿಲ್ಲಾಡಳಿತ ಹಾಗೂ ಸಂಬAಧಿಸಿದ ಅಧಿಕಾರಿಗಳು ತಿಂಗಳೊಳಗಾಗಿ ದತ್ತಪೀಠದ ದ್ವಾರಬಾಗಿನ ಉರ್ದು ಫಲಕ ತೆರವುಗೊಳಿಸಿ ಕನ್ನಡದಲ್ಲಿ ಫಲಕ ಹಾಕಬೇಕು. ಈ ಬಗ್ಗೆ ಜಿಲ್ಲಾಡಳಿತ ನಿರ್ಲಕ್ಷö್ಯನೀತಿ ಅನುಸರಿಸಿದರೆ ಸೇನೆ ಕಾರ್ಯಕರ್ತರು ಫಲಕ ತೆರವುಗೊಳಿಸುತ್ತೇವೆ ಎಂದರು.
ಪ್ರತಿಭಟನೆಯಲ್ಲಿ ಸೇನೆಯ ಕಾರ್ಯದರ್ಶಿ ಚಂದ್ರೇಗೌಡ, ಪದಾಧಿಕಾರಿಗಳಾದ ಚಿದಾನಂದ್, ನಾಗರಾಜ್, ನಂದಿನಿ ಮತ್ತಿತರರಿದ್ದರು.