ಜಿಲ್ಲೆ

ದತ್ತಪೀಠ ಹಿಂದುಗಳ ಆಸ್ತಿಯಾಗಲಿ:ಅಮರನಾಥ್

ಹಾಸನ: ಕಾಂಗ್ರೆಸ್ ಪಕ್ಷದ ಅಜೆಂಡಾದಲ್ಲಿ ಏನಾದರೂ ದತ್ತಪೀಠ ವಕ್ಫ್ ಬೋರ್ಡಿನ ಆಸ್ತಿ ಎಂದು ಹೇಳಿದರೆ ಶ್ರೀ ರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಒಂದು ಲಕ್ಷ ಜನ ಹಿಂದುಗಳು ಸೇರಿ ಬಾಬಾನ ದರ್ಗಾವನ್ನು ಕಿತ್ತೆಸೆಯುವ ಹೋರಾಟ ಮಾಡುವುದಾಗಿ ಶ್ರೀ ರಾಮಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಅಮರನಾಥ್ ಎಚ್ಚರಿಸಿದರು.

ಪ್ರತಿವರ್ಷದಂತೆ ಈ ವರ್ಷವೂ ಕೂಡ ನೂರಾರು ಜನರು ಚಿಕ್ಕಮಗಳೂರಿನ ದತ್ತಪೀಠಕ್ಕೆ ಭಾನುವಾರ ಪ್ರಯಾಣ ಬೆಳೆಸುವ ಮೊದಲು ನಗರದ ಎಂ.ಜಿ. ರಸ್ತೆ ಬಳಿ ಇರುವ ದತ್ತಾತ್ರೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ಮಂಡಳಿ ಮೂಲಕ ಭೂ ಕಬಳಿಕೆ ಎಲ್ಲೆಡೆ ಆಗುತ್ತಿದೆ. ಬಾಬಾ ಬುಡನಗಿರಿ ಎಂದು ಸೃಷ್ಟಿ ಮಾಡಿದ್ದು, ದತ್ತಪೀಠ ಕಬಳಿಕೆಗೆ ಯಾವ ಕಾರಣಕ್ಕೂ ಬಿಡುವುದಿಲ್ಲ. ಕಾನೂನು ಮೂಲಕ ಜಯ ಗಳಿಸುತ್ತೇವೆ. ಏನಾದರೂ ಕೋರ್ಟಿನಲ್ಲಿ ಹಿನ್ನಡೆಯಾದರೆ ಮುಂದಿನ ಹೋರಾಟವನ್ನು ಶ್ರೀರಾಮ ಸೇನೆಯಿಂದ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಕಳೆದ 21 ವರ್ಷಗಳಿಂದಲೂ ದತ್ತಮಾಲೆ ಅಭಿಯಾನ ನಡೆಸಲಾಗುತ್ತಿದೆ. ಈ ವರ್ಷ ಅದ್ಧೂರಿಯಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲ ಜಿಲ್ಲೆಗಳಿಂದಲೂ ಕಾರ್ಯಕರ್ತರು ಚಿಕ್ಕಮಗಳೂರಲ್ಲಿ ಒಟ್ಟಾಗಿ ಸೇರುತ್ತಿದ್ದೇವೆ. ಪ್ರಮೋದ್ ಮುತಾಲಿಕ್, ಅವದೂತ ದತ್ತಾತ್ರೇಯ ಗುರುಗಳು, ಮಾಜಿ ಸಚಿವ ಸಿ.ಟಿ. ರವಿ ಸೇರಿದಂತೆ ಹಲವಾರು ಗಣ್ಯರು ದತ್ತಪೀಠ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಇಲ್ಲಿರುವ ಗೋರಿಗಳನ್ನು ಆದಷ್ಟು ಬೇಗ ತೆರವು ಮಾಡಬೇಕು. ದತ್ತಾತ್ರೇಯ ಪೀಠ ಹಿಂದುಗಳ ಪೀಠ ಆಗಬೇಕು ಎನ್ನುವ ಬೇಡಿಕೆಯನ್ನಿಟ್ಟುಕೊಂಡು ದತ್ತಮಾಲಾ ಅಭಿಯಾನವನ್ನು ಪ್ರಾರಂಭ ಮಾಡಲಾಗಿದೆ ಎಂದರು.

ಹಾಸನ ಜಿಲ್ಲೆಯಿಂದ ಶ್ರೀ ರಾಮಸೇನೆ ಅಧ್ಯಕ್ಷ ಹೇಮಂತ್ ನೇತೃತ್ವದಲ್ಲಿ 300ಕ್ಕೂ ಹೆಚ್ಚಿನ ಕಾರ್ಯಕರ್ತರು ಚಿಕ್ಕಮಗಳೂರಿಗೆ ಪ್ರಯಾಣ ಬೆಳೆಸಿದ್ದೇವೆ. ದತ್ತಪೀಠ ವಿಚಾರವಾಗಿ ಎಲ್ಲ ದಾಖಲೆಗಳು ನಮ್ಮ ಪರವಾಗಿ ಇದ್ದರೂ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಹಲವಾರು ವರ್ಷಗಳ ಕಾಲ ಹೋರಾಟ ನಡೆಯಿತು. ಅದೆ ಮಾದರಿಯಲ್ಲಿ ಈ ಹೋರಾಟ ಮಾಡಲಿದ್ದೇವೆ ಎಂದು ಹೇಳಿದರು.

ಶ್ರೀ ರಾಮಸೇನೆ ಜಿಲ್ಲಾಧ್ಯಕ್ಷ ಹೇಮಂತ್ ಜಾನೆಕೆರೆ ಮಾತನಾಡಿ, ಅಲ್ಪಸಂಖ್ಯಾತರ ಓಲೈಕೆಗೆ ಕಾಂಗ್ರೆಸ್ ಸರ್ಕಾರ ಎಲ್ಲೆಡೆ ಹಿಂದು ಮಠಗಳ ಆಸ್ತಿಯನ್ನು ವಕ್ಫ್ ಮಂಡಳಿಗೆ ಸೇರಿಸುತ್ತಿದೆ. ರಾಜಕಾರಣಿಗಳ ರಾಜಕೀಯವನ್ನು ಹಿಂದು ಮತದಾರರು ನೋಡಬೇಕಾಗಿದೆ. ಹಿಂದುಗಳೆಲ್ಲಾ ಒಗ್ಗಟ್ಟಾಗಬೇಕಿದೆ ಎಂದು ಕರೆ ನೀಡಿದರು.

ಇದೆ ವೇಳೆ ಶ್ರೀ ರಾಮಸೇನೆಯ ಕಾರ್ಯಾಧ್ಯಕ್ಷ ಮಹೇಶ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಕೆ.ಕೆ. ಪುನೀತ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮನು ಜಗತ್, ಜಿಲ್ಲಾ ಕಾರ್ಯದರ್ಶಿ ಧರ್ಮ ನಾಯಕ್, ನಗರ ಅಧ್ಯಕ್ಷ ಅರುಣ್, ತಾಲೂಕು ಅಧ್ಯಕ್ಷ ಪ್ರದೀಪ್, ವಿದ್ಯಾರ್ಥಿ ಮುಖಂಡ ಅಭಿಲಾಶ್, ಕುಮಾರ್ ಯಡಿಯೂರು ಇತರರು ಉಪಸ್ಥಿತರಿದ್ದರು.