ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್  
ಜಿಲ್ಲೆ

ದತ್ತಜಯಂತಿ ವೇಳೆ ಪ್ರಚೋದನಕಾರಿ ಭಾಷಣ ಆರೋಪ

ಚಿಕ್ಕಮಗಳೂರು: ಇತ್ತೀಚೆಗೆ ನಡೆದ ದತ್ತಜಯಂತಿ ಸಂದರ್ಭದಲ್ಲಿ ಸಂಘ ಪರಿವಾರದ ಮುಖಂಡರು ಪ್ರಚೋದನಾಕಾರಿ ಭಾಷಣ ಮಾಡುವ ಮೂಲಕ ಅಮಾಯಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಆರೋಪಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಹಿಂದೂ ಧರ್ಮದಿಂದ ಮಾತ್ರ ನಮ್ಮ ರಕ್ಷಣೆ ಸಾಧ್ಯ ಎಂದಿದ್ದಾರೆ. ಆದರೆ ಈ ದೇಶದ ಸಮಸ್ತ ಜನರನ್ನು ರಕ್ಷಿಸಲು ನಮಗೆ ಸಂವಿಧಾನ ಇದೆ. ಅದನ್ನು ಎಲ್ಲರೂ ಒಪ್ಪಿಕೊಂಡಿz್ದೆÃವೆ. ಅವರ ಹಿಂದುತ್ವವೇ ಬೇರೆ ನಮ್ಮ ಹಿಂದೂ ಧರ್ಮವೇ ಬೇರೆ. ಸಂವಿಧಾನ ತಿರುಚುತ್ತೇವೆ, ಬದಲಾಯಿಸುತ್ತೇವೆ ಎಂದು ಹೇಳಿದವರು ನಾವಲ್ಲ. ಇದೇ ಬಿಜೆಪಿಯವರು ಎಂಬುದನ್ನು ಅರಿಯಲಿ. ದೇಶದ ಜನರಿಗೆ ಬುದ್ದಿ ಹೇಳುವುದನ್ನು ಬಿಟ್ಟು ಅವರವರ ಸಂಘಟನೆ ಕಾರ್ಯಕರ್ತರಿಗೆ ಬುದ್ದಿ ಹೇಳಿಕೊಳ್ಳಲಿ ಎಂದು ಹೇಳಿದರು.

ಇನ್ನೊಬ್ಬ ಮುಖಂಡ ಚಕ್ರವರ್ತಿ ಸೂಲಿಬೆಲೆ ಮಾತನಾಡುತ್ತಾ, ಕಾಂಗ್ರೆಸ್ ಅಧಿಕಾರದಲ್ಲಿದೆ. ಹೀಗಾಗಿ ಮುಸ್ಲಿಂರ ತುಷ್ಟೀಕರಣ ಮಾಡುತ್ತಿದೆ ಎಂದು ಹೇಳಿದ್ದಾರೆ. ಆದರೆ ರಾಜ್ಯದ ಜನತೆ ೧೩೬ ಸೀಟು ಕೊಟ್ಟು ಕಾಂಗ್ರೆಸ್ ಬೆಂಬಲಿಸಿದ್ದಾರೆ ಎಂದು ತಿರುಗೇಟು ನೀಡಿದರು.

ಸಾಮಾಜಿಕ ನ್ಯಾಯದ ಪರಿಕಲ್ಪನೆ ಇಟ್ಟು ಕಾಂಗ್ರೆಸ್ ಕೆಲಸ ಮಾಡುತ್ತಿದೆ. ಐದು ಗ್ಯಾರಂಟಿ ಯೋಜನೆಗಳ ಲಾಭ ಜಾತ್ಯಾತೀತವಾಗಿ ಎಲ್ಲರಿಗೂ ದೊರೆಯುತ್ತಿದೆ. ಮುಸ್ಲಿಮರಿಗೆಂದು ಪ್ರತ್ಯೇಕವಾದ ಯೋಜನೆಗಳನ್ನು ಕಾಂಗ್ರೆಸ್ ಸರಕಾರ ಜಾರಿಗೆ ತಂದಿದೆಯೇ ಎಂದು ಪ್ರಶ್ನಿಸಿದರು. ಇಂತಹ ಸುಳ್ಳು ಪೊಳ್ಳು ಭಾಷಣ ಮಾಡಿ ಇವರು ಮನೆಗೆ ಹೋಗುವುದು. ಇಲ್ಲಿ ಅಮಾಯಕರು ಬೂಟಿನ ಏಟು ತಿನ್ನುವುದು. ಇದೇ ಇವರು ಮಾಡುವ ಕೆಲಸ ಎಂದು ಟೀಕಿಸಿದರು.

ಮಾಜಿ ಸಚಿವ ಸಿ.ಟ.ರವಿ ಅವರು, ಬಾಬಾಬುಡನ್‌ಗಿರಿಯಲ್ಲಿರುವುದು ನೈಜ ಗೋರಿಗಳೆ ಅಲ್ಲ ಎಂದಿದ್ದಾರೆ. ಸಿ.ಟಿ.ರವಿ ಒಮ್ಮೆ ಗೋರಿ ಮುಟ್ಟಲಿ ನೋಡೋಣ. ಬಿಜೆಪಿ ಸರ್ಕಾರದಲ್ಲಿ ೪ ಜನ ಮುಖ್ಯಮಂತಿಗಳು ರಾಜ್ಯದಲ್ಲಿ ಅಧಿಕಾರ ಮಾಡಿದ್ದಾರೆ. ೨ ಜನ ಸಚಿವರು ಜಿಲ್ಲೆಯಲ್ಲಿ ಬಿಜೆಪಿಯಿಂದ ಆಯ್ಕೆ ಆಗಿದ್ದರು. ಆಗ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು.

ಆ ಸಂದರ್ಭದಲ್ಲಿ ಏಕೆ ಆ ಗೋರಿ ಸ್ಥಳಾಂತರ ಮಾಡಲಿಲ್ಲ ಎಂದು ಪ್ರಶ್ನಿಸಿದ ಅವರು, ಈಗ ಕಾಂಗ್ರೆಸ್ ಅಧಿಕಾರದಲ್ಲಿದೆ ಎಂದು ಅಮಾಯಕ ಜನರನ್ನು ದಾರಿ ತಪ್ಪಿಸುವ ಸಲುವಾಗಿ ಕಾನೂನಿಗೂ ಮೀರಿದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ೧೯೯೧ರ ಕೋರ್ಟ್ ಆದೇಶ ಏನಿದೆ ಎಂಬುದನ್ನು ಸಿ.ಟಿ.ರವಿ ಮೊದಲು ಓದಿಕೊಂಡು ಮಾತನಾಡಲಿ ಎಂದು ಸಲಹೆ ನೀಡಿದರು.

ಸದಾ ಭಾವಾನಾತ್ಮಕ ವಿಚಾರ ಕೆದಕಿ ಆ ಮೂಲಕ ಅಮಾಯಕ ಜನರನ್ನು ಪ್ರಚೋದಿಸುವ ಕೆಲಸವನ್ನು ಬಿಜೆಪಿ ಮಾಡಿಕೊಂಡೇ ಬಂದಿದೆ. ಆದರೆ ಕಾಂಗ್ರೆಸ್ ಎಲ್ಲ ಜನಸಮುದಾಯಕ್ಕೂ ಸಾಮಾಜಿಕ ನ್ಯಾಯ ಕೊಡುತ್ತಾ ಬಂದಿದೆ. ಗ್ಯಾರಂಟಿ ಯೋಜನೆಯಿಂದ ಅತ್ತೆ ಸೊಸೆ ಬೋರ್‌ವೆಲ್ ಕೊರೆಸಿರುವ ನಿದರ್ಶನಕ್ಕಿಂತ ಮತ್ತೇನು ಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಹಿರೇಮಗಳೂರು ರಾಮಚಂದ್ರ, ಆನಂದ್, ಶಿವರಾಂ, ಜಯರಾಜ್‌ಅರಸ್, ಶ್ರೀನಿವಾಸ್ ದೇವಾಂಗ, ಶಾಂತಕುಮಾರ್, ರಘು ಇದ್ದರು.