ನಾಗಮಂಗಲ: ತಾಲೂಕಿನ ಬೆಳ್ಳೂರು ಹೋಬಳಿಯ ದಡಗ ಕೆರೆಗೆ ಹೇಮಾವತಿ ನಾಲೆಯಿಂದ ನೀರು ತುಂಬಿಸುವ ಏತ ನೀರಾವರಿ ಕಾಮಗಾರಿಗೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಶಾಸಕ ಸುರೇಶ್ ಗೌಡ ಶುಕ್ರವಾರ ಚಾಲನೆ ನೀಡಿದರು.
ಸುಮಾರು 5 ಕೋಟಿ ರೂ. ವೆಚ್ಚದ ಕಾಮಗಾರಿಯಾಗಿದ್ದು, ದಡಗ ಗ್ರಾಮದ ಕೆರೆ ತುಂಬಿಸುವ ಮೂಲಕ ಕೋಡಿಯಿಂದ ಸುತ್ತಮುತ್ತಲಿನ ಸುಮಾರು 6 ಗ್ರಾಮಗಳ ಕೆರೆಗಳನ್ನು ತುಂಬಿಸಬಹುದಾಗಿದೆ. ಮುಂದಿನ ನವರಾತ್ರಿಯೊಳಗೆ ಕೆರೆ ತುಂಬಿಸುವ ಏತನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಳಿಸಬೇಕು. ನೀರು ತುಂಬಿಸುವುದಕ್ಕೂ ಮೊದಲು ಕೆರೆಯಲ್ಲಿನ ಹೂಳು ತೆಗೆಯುವ ಮೂಲಕ ನೀರಿನ ಸಂಗ್ರಹವನ್ನು ಹೆಚ್ಚಿಸಬೇಕು ಎಂದು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸೂಚಿಸಿದರು.
ಯೋಜನೆಗೆ ಸಂಬಂಧಿಸಿದ ನೀಲಿನಕಾಶೆಯನ್ನು ಅಧಿಕಾರಿಗಳಿಂದ ಪಡೆದು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಗುತ್ತಿಗೆದಾರರು ಮತ್ತು ಅಧಿಕಾರಿಗಳ ಜತೆ ಕಾಮಗಾರಿಗೆ ಸಂಬಂಧಿಸಿದಂತೆ ಕೆಲಕಾಲ ಚರ್ಚಿಸಿದರು. ಕಾಮಗಾರಿಯಿಂದ ಗ್ರಾಮಸ್ಥರಿಗೆ ಹಾಗೂ ಬೆಳೆಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮವಹಿಸುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಶಾಸಕ ಸುರೇಶ್ ಗೌಡರನ್ನು ಗ್ರಾಮಸ್ಥರು ಅಭಿನಂದಿಸಿದರು. ಮುಖಂಡರಾದ ಗೌರೀಶ್, ಮಂಜುನಾಥ್, ಶ್ರೀನಿವಾಸ್, ಜಯರಾಮ್, ಲೋಹಿತ್, ಪುನೀತ್ ಇತರರು ಇದ್ದರು.