ಹಾಸನ: ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಈ ಬಾರಿ ಸ್ಪರ್ಧಿಸಿರುವ 11 ಅಭ್ಯರ್ಥಿಗಳಲ್ಲಿ ನಾನೊಬ್ಬನೇ ಪ್ರಸ್ತುತ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಶಿಕ್ಷಕನಾಗಿ ನಾನು ಶಿಕ್ಷಕರ ಸಮಸ್ಯೆಗಳನ್ನು ಅರಿತಿದ್ದೇನೆ. ಹೀಗಾಗಿ ಶಿಕ್ಷಕರು ನನ್ನನ್ನು ಬೆಂಬಲಿಸಬೇಕು ಎಂದು ದಕ್ಷಿಣ ಶಿಕ್ಷಕರ ಕ್ಷೇತ್ರದ ಬಿಎಸ್‌ಪಿ ಬೆಂಬಲಿತ ಅಭ್ಯರ್ಥಿ ಡಾ. ಹ.ರಾ. ಮಹೇಶ್ ಮನವಿ ಮಾಡಿದರು.
ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದ ವೃತ್ತಿ. ಆದರೆ ಇತ್ತೀಚಿನ ದಿನಗಳಲ್ಲಿ ಶಿಕ್ಷಕರನ್ನು ಕೂಡ ಅಪವಿತ್ರಗೊಳಿಸುವಂತಹ ಕೆಲಸವಾಗುತ್ತಿದೆ. ಕಳೆದ ಒಂದು ತಿಂಗಳಿನಿಂದ ಶಿಕ್ಷಕರ ಮನೆಗಳಿಗೆ ದುಬಾರಿ ಬೆಲೆಯ ಉಡುಗೊರೆಗಳನ್ನು ನೀಡಲಾಗುತ್ತಿದೆ. ಶಿಕ್ಷಕರನ್ನು ಗುಂಡು-ತುಂಡಿನ ಪಾರ್ಟಿಗಳನ್ನು ಕೊಡಿಸುತ್ತಿದ್ದಾರೆ. ಪಾರ್ಟಿಗಳಿಗೆ ಬರುವುದಿಲ್ಲ ಎನ್ನುವ ಶಿಕ್ಷಕರನ್ನು ಬೆದರಿಸುವ ಅಥವಾ ಅವರನ್ನು ಟಾರ್ಗೆಟ್ ಮಾಡುವ ಯತ್ನಗಳು ಕೂಡ ನಡೆಯುತ್ತಿವೆ. ಹೀಗಾಗಿ ಸುಶಿಕ್ಷಿತ ಶಿಕ್ಷಕರು ಈ ಬಾರಿ ನಿಜವಾದ ಶಿಕ್ಷಕನನ್ನು ಬೆಂಬಲಿಸಿ ಆಶೀರ್ವದಿಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು.
ಚಾಮರಾಜನಗರ ಜಿಲ್ಲೆಯ ಹರದನಹಳ್ಳಿ ಗ್ರಾಮೀಣ ಭಾಗದಿಂದ ಬಂದ ನಾನು ಮೈಸೂರು, ಬೆಂಗಳೂರು, ತುಮಕೂರು ವಿಶ್ವವಿದ್ಯಾಲಯಗಳಿಂದ ಎಂಎ, ಬಿ.ಎಡ್, ಎಂಇಡಿ ಮತ್ತು ಪಿಎಚ್ ಡಿ ಪದವಿಗಳನ್ನು ಪಡೆದುಕೊಂಡಿದ್ದೇನೆ. ಅಲ್ಲದೆ ಹಾಲಿ ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿದ್ದು ಸದನದಲ್ಲಿ ಶಿಕ್ಷಕರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಕ್ಷೇತ್ರದಲ್ಲಿ ನಾಲ್ಕು ಬಾರಿ ಸತತವಾಗಿ ಆಯ್ಕೆಯಾಗಿರುವವರು ಈಗಲೂ ಶಿಕ್ಷಕರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಮತ್ತೆ ಮತ ಕೇಳುತ್ತಿದ್ದಾರೆ. ಹಾಗಾದರೆ ಅವರ ಅವಧಿಯಲ್ಲಿ ಮತ್ತು ಹಿಂದಿನ ಸರ್ಕಾರದ ಅವಧಿಯಲ್ಲಿ ಶಿಕ್ಷಕರಿಗೆ ಯಾವ ಕೆಲಸ ಮಾಡಿದ್ದಾರೆ ಎಂಬುದನ್ನು ಅವರು ತಿಳಿಸಲಿ. ಜತೆಗೆ ಶಿಕ್ಷಕರಾಗಲು ಅರ್ಹತೆ ಇಲ್ಲದ ಕೇವಲ ಎಸ್‌ಎಸ್‌ಎಲ್‌ಸಿ ಪಾಸ್ ಆಗದೆ ಇದ್ದವರನ್ನು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ನಿಲ್ಲಿಸಲಾಗಿದೆ ಎಂದು ಕಾಂಗ್ರೆಸ್ ಹಾಗೂ ಎನ್‌ಡಿಎ ಅಭ್ಯರ್ಥಿಗಳ ವಿರುದ್ಧ ಹರಿಹಾಯ್ದರು.
ಜೂ.3ರಂದು ನಡೆಯಲಿರುವ ಪ್ರಜ್ಞಾವಂತ ಶಿಕ್ಷಕ ಸಮುದಾಯದ ಕ್ಷೇತ್ರಕ್ಕೆ ಚಿಂತಕರ ಚಾವಡಿ ಎನಿಸಿರುವ ವಿಧಾನ ಪರಿಷತ್ತಿಗೆ ನನ್ನನ್ನು ಬೆಂಬಲಿಸಿ ಗೆಲ್ಲಿಸುವ ಮೂಲಕ ನಿಮ್ಮಗಳ ಸಮಸ್ಯೆಗೆ ಧ್ವನಿಯಾಗಿ ಕೆಲಸ ಮಾಡುವುದರ ಜತೆಗೆ ಹೊಸಬರನ್ನು ಬೆಂಬಲಿಸಬೇಕು ಎಂದು ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಎಸ್ಪಿ ರಾಜ್ಯ ಸಂಯೋಜಕ ಕೃಷ್ಣಮೂರ್ತಿ, ರಾಜ್ಯ ಉಪಾಧ್ಯಕ್ಷ ಗಂಗಾಧರ್ ಬಹುಜನ್, ರಾಜ್ಯ ಕಾರ್ಯದರ್ಶಿ ಜಾಕೀರ್ ಹುಸೇನ್, ಪದಾಧಿಕಾರಿಗಳಾದ ಶಿವಮ್ಮ, ಜಾಕೀರ್ ಅಲ್ಲಾ ಶೇಕ್ ಮತ್ತು ಅತ್ನಿ ಹರೀಶ್ ಹಾಜರಿದ್ದರು.