ಹಾಸನ: ಮುಂದಿನ ತಿಂಗಳು 3 ರಂದು ನಡೆಯುವ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದು, ಪ್ರಮುಖ ಪಕ್ಷಗಳ ಅಭ್ಯರ್ಥಿಗಳಿಗೆ ತೊಡರುಗಾಲು ಹಾಕುವೆ, ಗೆಲ್ಲುವ ವಿಶ್ವಾಸವೂ ಇದೆ ಎಂದು ಕೆ.ಸಿ.ಪುಟ್ಟಸಿದ್ದಶೆಟ್ಟಿ ತಿಳಿಸಿದರು.
ಹಿಂದೆ ನಾನು ಎಂಎಲ್‌ಸಿ ಆಗಿದ್ದಾಗ ಸಾವಿರಾರು ಬೋಧಕರಿಗೆ ಸೇವಾ ಭದ್ರತೆ ಕೊಡಿಸಿದ್ದೇನೆ. ಶಿಕ್ಷಕರ ಸಮಸ್ಯೆಗಳಿಗೆ ಹೋರಾಟ ಮಾಡಿದ್ದೇನೆ. ಹೀಗಾಗಿ ಶಿಕ್ಷಕ ಬಂಧುಗಳು ನನ್ನ ಬೆಂಬಲಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಎಲ್ಲಾ ಜಿಲ್ಲೆಗಳಲ್ಲೂ ಸುತ್ತಾಡಿ, ಪ್ರವಾಸ ಮಾಡಿದ್ದೇನೆ. ಎಲ್ಲಾ ಕಡೆ ಉತ್ತಮ ವಾತಾವರಣ, ಗೆಲ್ಲುವ ಭರವಸೆಯೂ ಇದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಅವರು ನಾಲ್ಕು ಬಾರಿ ಗೆದ್ದು ಯಾವುದೇ ಕೆಲಸ ಮಾಡಿಲ್ಲ, ಹೀಗಾಗಿ ಅವರನ್ನು ಮತದಾರರು ತಿರಸ್ಕಾರ ಮಾಡಲಿದ್ದಾರೆ. ಹಾಗೆಯೇ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ವಿವೇಕಾನಂದ ಅವರು 124 ಕೋಟಿ ರೂ. ಒಡೆಯರಾಗಿದ್ದು, ಶಿಕ್ಷಣ ಇಲಾಖೆಯ ಗಂಧ ಗೊತ್ತಿಲ್ಲದ ಇಂಥವರು ಮೇಲ್ಮನೆಗೆ ಹೋಗುವುದರಿಂದ ಶಿಕ್ಷಣ ಕ್ಷೇತ್ರಕ್ಕೆ ಯಾವುದೇ ರೀತಿಯಲ್ಲೂ ಅನುಕೂಲ ಆಗದು ಎಂದರು.
ಸುದ್ದಿಗೋಷ್ಠಿಯಲ್ಲಿ ಪಿ.ಲಕ್ಷ್ಮಿಪತಿ, ತಿಮ್ಮ ಹನುಮಯ್ಯ, ಗಂಗಾಧರ, ಶಿವಕುಮಾರ್ ಮೊದಲಾದವರಿದ್ದರು.