ಜಿಲ್ಲೆ

ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರ ತರುವಲ್ಲಿ ಬಿಎಸ್‌ವೈ ಪ್ರಮುಖ ಪಾತ್ರ

ಆಲೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹುಟ್ಟುಹಬ್ಬದ ಪ್ರಯುಕ್ತ ಆಲೂರು-ಕಟ್ಟಾಯ ಮಂಡಲದ ಬಿಜೆಪಿ ಅಧ್ಯಕ್ಷೆ ಉಮಾ ರವಿ ಪ್ರಕಾಶ್ ಅವರ ನೇತೃತ್ವದಲ್ಲಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.

ಆಲೂರು ಕಟ್ಟಾಯ ಮಂಡಲದ ಬಿಜೆಪಿ ಅಧ್ಯಕ್ಷ ಉಮಾ ರವಿಪ್ರಕಾಶ್ ಮಾತನಾಡಿ, ಬಿ.ಎಸ್. ಯಡಿಯೂರಪ್ಪ ಅವರು 1983 ರಿಂದ ಶಾಸನಸಭೆಯ ಸದಸ್ಯರಾಗಿ ತಮ್ಮ ಸಿದ್ಧಾಂತಕ್ಕೆ ಬದ್ಧರಾಗಿ ಹಗಲಿರುಳು ಬಿಜೆಪಿ ಪಕ್ಷವನ್ನು ದಕ್ಷಿಣ ಭಾರತದಲ್ಲಿ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರತಿ ಹಂತದಲ್ಲೂ ಹೋರಾಟವೇ ತಮ್ಮ ಜೀವನದ ಮಂತ್ರವಾಗಿಸಿಕೊಂಡು ರಾಜ್ಯದ ಎಲ್ಲ ಸಮುದಾಯದ ಏಳಿಗೆಗೆ ಹಲವು ಜನಪರ ಯೋಜನೆಗಳನ್ನು ಜಾರಿ ತಂದು ಜನಸಾಮಾನ್ಯರಲ್ಲಿ ಅಜರಾಮರರಾಗಿದ್ದಾರೆ. ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರು ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಬಿಜೆಪಿ ಪಕ್ಷವನ್ನು ಪುನಃ ಅಧಿಕಾರಕ್ಕೆ ಬರುವಂತೆ ನೋಡಿಕೊಳ್ಳಬೇಕು ಎಂದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಬ್ಬನ ಕೃಷ್ಣಮೂರ್ತಿ ಮಾತನಾಡಿ, ಶಿಕಾರಿಪುರವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡು ರಾಜ್ಯವ್ಯಾಪಿ ಸಂಚರಿಸಿ, ಪಕ್ಷವನ್ನು ಅಧಿಕಾರಕ್ಕೆ ಏರಿಸಿ, ಜನನಾಯಕರಾಗಿ ರೂಪುಗೊಂಡು ಹಲವು ಯುವ ನಾಯಕರನ್ನು ಸೃಷ್ಟಿಸಿ ಯಶಸ್ವಿ ನಾಯಕರಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳಾಗಿ ಹಲವು ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಬಡವರು ದೀನ ದಲಿತರ ಏಳಿಗೆಗೆ ಹಗಲಿರಳು ದುಡಿದರು. ದಣಿವರಿಯದ ನಾಯಕ ಬಿ.ಎಸ್.ಯಡಿಯೂರಪ್ಪ ಅವರಿಗೆ ದೇವರು ಆರೋಗ್ಯ ಆಯಸ್ಸು ಹೆಚ್ಚು ನೀಡುವ ಮೂಲಕ ಯುವ ಬಿಜೆಪಿ ಕಾರ್ಯಕರ್ತರಿಗೆ ಆಶಾ ಕಿರಣರಾಗಲಿ ಎಂದರು.

ಬಿಜೆಪಿ ಯುವ ಮುಖಂಡ ಕಟ್ಟೆಗದ್ದೆ ನಾಗರಾಜ್ ಮಾತನಾಡಿ, ಬಿ.ಎಸ್. ಯಡಿಯೂರಪ್ಪ ಅವರು ನಾಲ್ಕು ಬಾರಿ ಮುಖ್ಯಮಂತ್ರಿಗಳಾಗಿ ರಾಜ್ಯದ ಎಲ್ಲ ಸಮುದಾಯ ಗುರುತಿಸಿ ಹಲವು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜನಸಾಮಾನ್ಯರ ಏಳಿಗೆಗೆ ದುಡಿದಿದ್ದಾರೆ. ಅವರು ನೀಡಿರುವ ಯೋಜನೆಗಳು ಇನ್ನೂ ಕೂಡ ಜೀವಂತವಾಗಿವೆ. ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರು ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದರು.

ಬಿಜೆಪಿ ಹಿರಿಯ ಮುಖಂಡ ಎ.ಎಚ್. ರಮೇಶ್, ಬಿಜೆಪಿ ಮುಖಂಡ ಕಟ್ಟೆಗದ್ದೆ ನಾಗರಾಜ್, ಮೋಹನ್ ಮಾವನೂರು, ಜಗದೀಶ್ ಮೂರುಡೂರು, ಗಜೇಂದ್ರ ಆಲೂರು, ಹರೀಶ್ ಸಮುದ್ರವಳ್ಳಿ, ಕರಿಯಯ್ಯ,ದೇವರಾಜು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.