ಗೋಣಿಕೊಪ್ಪ: ಜುಲೈ ಮೊದಲ, ಎರಡನೇ ವಾರ ಬಿಡುವು ನೀಡಿದ್ದ ಮಳೆರಾಯ ಇದೀಗ ಕೊನೆಯ ವಾರದಲ್ಲಿ ಬಿರುಸಾಗಿದ್ದು, ಎರಡು ದಿನಗಳಿಂದ ದಕ್ಷಿಣ ಕೊಡಗಿನ ಬಹುತೇಕ ಭಾಗದಲ್ಲಿ ಮಳೆರಾಯನ ಅಬ್ಬರ ಹೆಚ್ಚಾಗಿದೆ.
ಭತ್ತದ ಗದ್ದೆಯಲ್ಲಿ ನೀರಿಲ್ಲದೆ ಭತ್ತದ ಬೀಜಗಳು ನಿಗದಿತ ಸಮಯದಲ್ಲಿ ಮೊಳಕೆಯೊಡೆದಿರಲಿಲ್ಲ. ಇದೀಗ 2 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಭತ್ತದ ಗದ್ದೆಗಳಲ್ಲಿ ಕಾರ್ಮಿಕರು ಹಾಗೂ ರೈತರು ಕೃಷಿ ಚಟುವಟಿಕೆ ಯನ್ನು ಚುರುಕುಗೊಳಿಸಿದ್ದಾರೆ.
ಮಳೆ ಹಾಗೂ ಗಾಳಿಯ ರಭಸಕ್ಕೆ ಪೊನ್ನಂಪೇಟೆ ತಾಲೂಕಿನ ಹುದಿಕೇರಿ, ಬಾಳೆಲೆ, ಶ್ರೀಮಂಗಲ ಹೋಬಳಿಯ ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿವೆ. ರಸ್ತೆ ಬದಿಯ ಮರಗಳು ಗಾಳಿಯ ರಭಸಕ್ಕೆ ವಿದ್ಯುತ್ ಲೈನ್‌ನ ಮೇಲೆ ಉರುಳಿ ಬೀಳುತ್ತಿರುವುದರಿಂದ ವಿದ್ಯುತ್ ಕಂಬಗಳು ನೆಲಕಚ್ಚುತ್ತಿವೆ. ತೀವ್ರ ಗಾಳಿಯಿಂದಾಗಿ ಬಿರುನಾಣಿ -ಹುದಿಕೇರಿ ಪೊರಾಡು, ಹೈಸೊಡ್ಲೂರು ಸಂಪರ್ಕ ರಸ್ತೆಯ ಕಕ್ಕಟ್ಟ್ ಹೊಳೆ ನದಿ ಸೇತುವೆ ಸಮೀಪ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ಸಿಬ್ಬಂದಿ ತೆರಳಿ ತೆರವುಗೊಳಿಸಿದರು.
ಕೊಂಗಣ ಗ್ರಾಮದ ಕೆ.ಸುಭಾಶ್ ಎಂಬುವರಿಗೆ ಸೇರಿದ ಲೈನ್ ಮನೆಯ ಮೇಲೆ ಮರ ಬಿದ್ದಿದ್ದು ಮೂರು ಶೀಟುಗಳಿಗೆ ಹಾನಿಯಾಗಿದೆ. ಇದನ್ನು ಹೊರತುಪಡಿಸಿದರೆ ಪೊನ್ನಂಪೇಟೆ ತಾಲೂಕಿನ ಯಾವುದೇ ಭಾಗದಲ್ಲಿ ಮಳೆ ಗಾಳಿಗೆ ಮನೆ ಹಾನಿ ಉಂಟಾಗಿಲ್ಲ ಎಂದು ತಹಸೀಲ್ದಾರ್ ಪ್ರಶಾಂತ್ ಮಾಹಿತಿ ತಿಳಿಸಿದ್ದಾರೆ.