ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೌಟುಂಬಿಕ ಕಲಹದಿಂದ ದೌರ್ಜನ್ಯ ಹೆಚ್ಚಾಗಿದ್ದು, ಮಹಿಳೆಯರ ಸಂರಕ್ಷಣೆ ಕಾಯ್ದೆಯಡಿ ದಾಖಲಾದ ಗರಿಷ್ಠ ಪ್ರಕರಣಗಳನ್ನು ಸಮಾಲೋಚನೆಗಳ ಮೂಲಕ ಇತ್ಯರ್ಥ ಮಾಡಲಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ಆರ್.ನಾಯ್ಡು ತಿಳಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2020ರಿಂದ 2023 ಫೆಬ್ರವರಿ ತನಕ 722 ಕೌಟುಂಬಿಕ ಕಲಹದಿಂದ ಮಹಿಳಾ ದೌರ್ಜನ್ಯ ಪ್ರಕರಣ ದಾಖಲಾಗಿದ್ದು, 520 ಪ್ರಕರಣಗಳನ್ನು ಸಮಾಲೋಚನೆಯ ಮೂಲಕ ಇತ್ಯರ್ಥ ಮಾಡಲಾಗಿದೆ. 72 ನ್ಯಾಯಾಲಯದಲ್ಲಿ ಇತ್ಯರ್ಥಗೊಂಡಿವೆ. 292 ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇವೆ ಎಂದರು.
* ಮಕ್ಕಳಿಗೆ ನೈತಿಕ ಶಿಕ್ಷಣ: ಹದಿ ಹರೆಯದ ಪ್ರೇಮ ಪ್ರಕರಣ, ಲಿವಿಂಗ್ ಟುಗೆದರ್, ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದನ್ನು ತಡೆಯಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶಾಲಾ, ಕಾಲೇಜುಗಳಲ್ಲಿ ನೈತಿಕ ಶಿಕ್ಷಣ ನೀಡಲು ಶಿಕ್ಷಣ ಇಲಾಖೆಗೆ ಪತ್ರ ಬರೆಯಲಾಗಿದೆ. ಅನ್ಯಾಯಕ್ಕೊಳಗಾದ ಹೆಣ್ಣು ಮಕ್ಕಳು ಸ್ವಾವಲಂಬಿಯಾಗಿ ಬದುಕುವಂತೆ ಮಾಡಲು ಅಧಿಕಾರಿ ವರ್ಗ ಕೆಲಸ ಮಾಡುತ್ತಿದೆ ಎಂದವರು ಹೇಳಿದರು.
ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿರು ‘ಸಖಿ’ ಒನ್ ಸ್ಟಾಪ್ ಸೆಂಟರ್ ಮಾದರಿಯಾಗಿದೆ. 2020ರಿಂದ 2024 ಫೆಬ್ರವರಿ ತನಕ 837 ಪ್ರಕರಣ ದಾಖಲಾಗಿದೆ. ನೊಂದು ಬರುವ ಹೆಣ್ಣು ಮಕ್ಕಳಿಗೆ ಇಲ್ಲಿ ಒಂದೇ ಸೂರಿನಡಿ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ. 5 ಮಹಿಳಾ ಸಾಂತ್ವನ ಕೇಂದ್ರಗಳು, ಏಳು ಶಿಶು ಅಭಿವೃದ್ಧಿ ಕಚೇರಿಗಳಿದ್ದು, ಮಕ್ಕಳು, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯಗಳು ನಡೆದಾಗ ಇಲ್ಲಿನ ಅಧಿಕಾರಿಗಳು ಶೀಘ್ರ ಸ್ಪಂದನೆ ನೀಡುತ್ತಿದ್ದಾರೆ ಎಂದರು.
ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಕಡಿಮೆ ಸಂಖ್ಯೆಯಲ್ಲಿದೆ. 2021ರಲ್ಲಿ ಕಮಿಷನರೆಟ್ ವ್ಯಾಪ್ತಿಯಲ್ಲಿ 1 ಹಾಗೂ ಪೊಲೀಸ್ ಅಧೀಕ್ಷರ ವ್ಯಾಪ್ತಿಯಲ್ಲಿ 3 ಪ್ರಕರಣ ದಾಖಲಾಗಿದ್ದು, ಆ ಬಳಿಕ ಯಾವುದೇ ಪ್ರಕರಣ ದಾಖಲಾಗಿಲ್ಲ. ಇಲ್ಲಿನ ಜನರು ಜಾಗೃತರಾಗಿದ್ದಾರೆ ಎಂದರು.
* 208 ಪೊಲೀಸ್ ದೌರ್ಜನ್ಯ: ರಾಜ್ಯದಲ್ಲಿ ಮೂರು ವರ್ಷದಲ್ಲಿ ಎಸ್‌ಐ ರ‌್ಯಾಂಕ್‌ಗಿಂತ ಕೆಳಗಿನ ಹುದ್ದೆಯ ಪೊಲೀಸರಿಂದ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ 208 ಪ್ರಕರಣ ದಾಖಲಾಗಿದೆ. ಅವುಗಳಲ್ಲಿ 21 ಪ್ರಕರಣ ಇತ್ಯರ್ಥಗೊಂಡಿವೆ. ಉಳಿದ ಪ್ರಕರಣಗಳನ್ನು ಹಿರಿಯ ಅಧಿಕಾರಿಗಳಿಗೆ ವಹಿಸಿ ಕೊಡಲಾಗಿದೆ. ಕೆಲವು ಪ್ರಕರಣಗಳಲ್ಲಿ ಅಮಾನತು ಕೂಡ ಆಗಿದೆ. ಬಹುತೇಕ ಪ್ರಕರಣಗಳು ಠಾಣೆಗೆ ಹೋದಾಗ ಸ್ಪಂದನೆ ನೀಡಿಲ್ಲ, ಏಕ ವಚನದಲ್ಲಿ ಮಾತನಾಡಿದರು ಇತ್ಯಾದಿ. ಅನೈತಿಕ ಸಂಬಂಧದಂತಹ ಗಂಭೀರ ಪ್ರಕರಣಗಳೂ ಇವೆ ಎಂದು ಪ್ರಮೀಳಾ ನಾಯ್ಡು ಹೇಳಿದರು.
ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕುಮಾರ್ ಮಾತನಾಡಿ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ಸೂಕ್ತ ವ್ಯವಸ್ಥೆಗೆ 2 ವಸತಿಗೃಹಗಳನ್ನು ಪ್ರಾರಂಭಿಸಲಾಗಿದೆ. ದೇರೆಬೈಲ್ ಕೊಂಚಾಡಿ ಹಾಗೂ ಕಂಕನಾಡಿಯಲ್ಲಿ ನೂತನ ಕಟ್ಟಡಕ್ಕೆ ಜಾಗ ಗುರುತಿಸಲಾಗಿದೆ. ಮಹಿಳೆಯರು ತೊಂದರೆಗೆ ಸಿಲುಕಿದಾಗ ತುರ್ತು ಸಹಾಯವಾಣಿ 112 ಮತ್ತು 181ಗೆ ಕರೆ ಮಾಡಬಹುದು ಎಂದರು.
ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.