ಜಿಲ್ಲೆ

ದಕ್ಷ ಕಾಲೇಜಿನಲ್ಲಿ ಗ್ರಾಮೀಣ ಮಹಿಳಾ ದಿನ ಆಚರಣೆ

ಮೈಸೂರು: ದಕ್ಷ ಕಾಲೇಜ್ ಆಫ್ ಗ್ಲೋಬಲ್ ಎಜುಕೇಶನ್ ಟ್ರಸ್ಟ್‌ನಿಂದ ಅಂತಾರಾಷ್ಟ್ರೀಯ ಗ್ರಾಮೀಣ ಮಹಿಳಾ ದಿನ ಆಚರಿಸಲಾಯಿತು.
ಈ ವರ್ಷದ ಆಶಯಕ್ಕೆ ಅನುಗುಣವಾಗಿ ಸರ್ವರಿಗೂ ಉತ್ತಮ ಆಹಾರ ಧಾನ್ಯವನ್ನು ಬೆಳೆಸುವ ಗ್ರಾಮೀಣ ಮಹಿಳೆಯರು ಮತ್ತು ಪ್ರಪಂಚದ ಆಹಾರ ವ್ಯವಸ್ಥೆಯಲ್ಲಿ ಗ್ರಾಮೀಣ ಮಹಿಳೆಯರು ಹಾಗೂ ಬಾಲಕಿಯರು ವಹಿಸುವ ಪ್ರಮುಖ ಪಾತ್ರವನ್ನು ಪ್ರಮುಖವಾಗಿ ಬಿಂಬಿಸಲಾಯಿತು. ದಕ್ಷ ಸಂಸ್ಥೆಯ ಆಡಳಿತ ಮಂಡಳಿ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸಂವಾದಾತ್ಮಕ ಅಧಿವೇಶನವನ್ನು ನಡೆಸಿದರು.
ಸುಸ್ಥಿರ ಬೆಳವಣಿಗೆ, ಆರೋಗ್ಯಕರ ಜೀವನ ಮತ್ತು ಜೀವನಕ್ಕೆ ಅಗತ್ಯವಾದ ಅಂಶಗಳ ಸಂರಕ್ಷಣೆ, ತ್ಯಾಜ್ಯ ಮತ್ತು ಅದರ ತೊಂದರೆಯನ್ನು ಕಡಿಮೆ ಮಾಡಲು ಈ ಬಾರಿಯ ಆಶಯವನ್ನು ಸ್ಥಿರವಾಗಿ ಅಭ್ಯಾಸ ಮಾಡುವುದು ಅತ್ಯುತ್ತಮ ಬೆಳವಣಿಗೆ ಎಂಬ ಅಂಶದ ಮೇಲೆ ಸಂವಾದದ ಬೆಳಕು ಚೆಲ್ಲಿತು.
ಗ್ಲೋಬಲ್ ಎಜುಕೇಶನ್ ಟ್ರಸ್ಟ್‌ನ ಕಾರ್ಯದರ್ಶಿ ಸೋನಿಯಾ ರಾಜು ಮಾತನಾಡಿ, ನಮ್ಮ ಭೂಮಿಯು ಎಲ್ಲರಿಗೂ ಸಾಕಷ್ಟು ಉತ್ತಮ ಆಹಾರವನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದ್ದರೂ ಹಸಿವು, ಅಪೌಷ್ಟಿಕತೆ ಮತ್ತು ಆಹಾರದ ಅಭದ್ರತೆ ಪ್ರಪಂಚದ ಅನೇಕ ಭಾಗಗಳಲ್ಲಿ ಹೆಚ್ಚುತ್ತಿದೆ. ಹವಾಮಾನ ಬಿಕ್ಕಟ್ಟುಗಳ ಜತೆಗೆ ಕೋವಿಡ್ -19ರ ಸಾಂಕ್ರಾಮಿಕವೂ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. 2.37 ಬಿಲಿಯನ್ ಜನರು 2020ರಲ್ಲಿ ತಿನ್ನಲು ಸಾಕಷ್ಟು ಆಹಾರ ಪದಾರ್ಥಗಳನ್ನು ಹೊಂದಿಲ್ಲ ಎನ್ನುವ ವರದಿ ಇದೆ. ಅದು ಹಿಂದಿನ ವರ್ಷಕ್ಕಿಂತ ಪ್ರತಿಶತ 20ರಷ್ಟು ಹೆಚ್ಚು ಎಂದು ಆತಂಕ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಪ್ರಾಯೋಗಿಕ ಚಟುವಟಿಕೆಯಾಗಿ, ವಿದ್ಯಾರ್ಥಿಗಳು, ಸಿಬ್ಬಂದಿ ಕ್ಯಾಂಪಸ್‌ನಲ್ಲಿ ನಿರ್ಮಿಸಿರುವ ಸಾವಯವ ತರಕಾರಿ ತೋಟದಲ್ಲಿ ಶ್ರಮದಾನ ಮಾಡಿದರು.