ಬೆಟ್ಟದಪುರ: ಪ್ರತಿ ವ್ಯಕ್ತಿ ದಂತದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು ಸಲಹೆ ನೀಡಿದರು.
ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮದಡಿ ಆರೋಗ್ಯ ಇಲಾಖೆ ವತಿಯಿಂದ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ದಂತ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಪ್ರತ್ಯೇಕ ಬ್ರಷ್‌ನಲ್ಲಿ ಹಲ್ಲು ಉಜ್ಜುವ ಅಭ್ಯಾಸ ಇಟ್ಟಿಕೊಳ್ಳಬೇಕು. ಯಾವುದೇ ಆಹಾರ ಪದಾರ್ಥ ಸೇವಿಸಿದ ಮೇಲೆ ನೀರಿನಲ್ಲಿ ಬಾಯಿ ಮುಕ್ಕಳಿಸಬೇಕು. ಹಲ್ಲು ಉಜ್ಜುವಾಗ ವಸಡಿನಲ್ಲಿ ರಕ್ತಸ್ರಾವವಾಗುತ್ತಿದ್ದರೆ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳಬೇಕು. ಬೆಳಗ್ಗೆ ಮತ್ತು ರಾತ್ರಿ ತಪ್ಪದೆ ಬ್ರಷ್ ಮಾಡಬೇಕು ಎಂದು ಸಲಹೆ ನೀಡಿದರು.
ಜನರ ಆರೋಗ್ಯ ಹಿತದೃಷ್ಟಿಯಿಂದ ಆರೋಗ್ಯ ಇಲಾಖೆ ಉಚಿತ ಚಿಕಿತ್ಸಾ ಶಿಬಿರಗಳನ್ನು ಆಯೋಜನೆ ಮಾಡುತ್ತಿದೆ. ಇಂತಹ ಶಿಬಿರಗಳ ನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಬೆಟ್ಟದಪುರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪೂಜಾ, ದಂತ ವೈದ್ಯಾಧಿಕಾರಿಗಳಾದ ಡಾ.ದಿವ್ಯಾಶ್ರೀ, ಡಾ.ಜ್ಯೋತಿ ಇದ್ದರು.