ತ್ಯಾಮಗೊಂಡ್ಲು: ಹಲ್ಲಿನ ರಕ್ಷಣೆ ದೈಹಿಕ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಒಬ್ಬ ವ್ಯಕ್ತಿಯ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಪೂರಕವಾಗಿರಲು ಸದೃಢ ಮತ್ತು ಸ್ವಚ್ಛವಾದ ಹಲ್ಲುಗಳು ಅವಶ್ಯಕ ಎಂದು ತ್ಯಾಮಗೊಂಡ್ಲು ಸಮುದಾಯ ಆರೋಗ್ಯ ಕೇಂದ್ರದ ದಂತ ವೈದ್ಯ ಡಾ. ಸತ್ಯಂ ಗೌರ್ ಹೇಳಿದರು.
ಹೋಬಳಿಯ ಮಣ್ಣೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮ, ಕೆಎಲ್‌ಇ ದಂತ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ, ಮಣ್ಣೆ ಗ್ರಾಮ ಪಂಚಾಯಿತಿಯಿಂದ ಬುಧವಾರ ಆಯೋಜಿಸಿದ್ದ ಉಚಿತ ದಂತ ತಪಾಸಣಾ ಮತ್ತು ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು.
ಬಾಯಿ ಮತ್ತು ಹಲ್ಲಿನ ಆರೋಗ್ಯವು ಎಲ್ಲರಿಗೂ ಅತಿ ಮುಖ್ಯ. ವಯಸ್ಸು ಎಷ್ಟೇ ಇರಲಿ, ಹಲ್ಲುಗಳು ಆರೋಗ್ಯಕರವಾಗಿರಬೇಕು. ಹಲ್ಲುಗಳ ಸಮರ್ಪಕ ಆರೈಕೆಯಿಂದ ಜೀವನದುದ್ದಕ್ಕೂ ಆರೋಗ್ಯದಿಂದ ಇರಲು ಸಾಧ್ಯ ಎಂದು ಹೇಳಿದರು.
ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮದ ನೋಡಲ್ ಅಧಿಕಾರಿ ಡಾ. ಮಾಲಿನಿ ಮಾತನಾಡಿ, ನಾವು ಹೆಚ್ಚೆಚ್ಚು ಸಿದ್ಧಆಹಾರ ಸೇವಿಸುತ್ತೇವೆ. ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಆಹಾರ ಪದಾರ್ಥಗಳು ಹಲ್ಲುಗಳ ಆರೋಗ್ಯಕ್ಕೆ ಪೂರಕವಾಗಿದ್ದವು. ಅದರಿಂದಲೇ ಹಲ್ಲು ಶುಚಿಯಾಗಿರುತ್ತಿತ್ತು. ಆದರೆ ಈಗ ತಿನ್ನುವ ಆಹಾರ ಹಲ್ಲುಗಳ ಆರೋಗ್ಯಕ್ಕೆ ಮಾರಕವಾಗಿದೆ. ಚಾಕೋಲೆಟ್ ಅಂಟು ಪದಾರ್ಥ ತಿನ್ನುವುದರಿಂದ ಹಲ್ಲಿನ ರೋಗರುಜಿನಕ್ಕೆ ಕಾರಣವಾಗುತ್ತದೆ ಎಂದರು.
ಇಂದಿನ ಜನಾಂಗ ತಿನ್ನುವ ಪರಿ ನೋಡಿದರೆ, ತಿನ್ನಲೆಂದೇ ಜನಿಸಿದವರು ಎಂಬಂತೆ ಭಾಸವಾಗುತ್ತದೆ. ಬದುಕುವುದಕ್ಕಾಗಿ ತಿನ್ನಿ, ತಿನ್ನುವುದಕ್ಕಾಗಿ ಬದುಕಬೇಡಿ ಎಂಬ ಹಿರಿಯರ ಮಾತು ವಿಚಿತ್ರವಾದರೂ ಸತ್ಯ ಎಂದು ಹೇಳಿದರು.
ಮಣ್ಣೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರವೀಂದ್ರ ಮಾತನಾಡಿ, ದಂತ ಸಂರಕ್ಷಣೆ ಹಾಗೂ ಬಾಯಿ ಸ್ವಚ್ಛತೆಗೆ ಹೆಚ್ಚಿನ ಗಮನಕೊಡಬೇಕು. ನಿರ್ಲಕ್ಷ ತೋರಿದರೆ ಉಂಟಾಗುವ ದುಷ್ಪರಿಣಾಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಣ್ಣೆ ಗ್ರಾಪಂ ಪಿಡಿಒ ಸಿದ್ದರಾಜಯ್ಯ, ಮಣ್ಣೆ ಪಿಎಚ್‌ಸಿ ಾರ್ಮಸಿಸ್ಟ್ ಶ್ಯಾಮಲಾ, ನೌಕರ ಅನಂತ್ ಮತ್ತಿತರರಿದ್ದರು.