ಶನಿವಾರಸಂತೆ: ಸಮೀಪದ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಭಂಡಾರ ಸುತ್ತಮುತ್ತಲಿನ 18 ಹಳ್ಳಿಗಳ ಗ್ರಾಮದೇವತೆ ಶ್ರೀ ದಂಡಿನ ಮಾರಿಯಮ್ಮ ದೇವಸ್ಥಾನ ಉದ್ಘಾಟನೆ ಮತ್ತು ಮರುಪ್ರತಿಷ್ಠಾಪನಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.
ದಂಡಿನ ಮಾರಿಯಮ್ಮ ದೇವಸ್ಥಾನವನ್ನು ಶತಮಾನದ ಹಿಂದೆ ನಿರ್ಮಿಸಲಾಗಿತ್ತು. ಶಿಥಿಲಗೊಂಡಿದ್ದ ದೇವಸ್ಥಾನವನ್ನು 18 ಗ್ರಾಮಗಳ ಗ್ರಾಮಸ್ಥರು 2 ತಿಂಗಳಲ್ಲಿ ಮರುನಿರ್ಮಿಸಿದ್ದರು. 5 ವರ್ಷಕೊಮ್ಮೆ ದೇವಿ ಜಾತ್ರೆ ನಡೆಯಲಿದ್ದು, ಮೇ 30 ಮತ್ತು 31ರಂದು ಜಾತ್ರೆ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಕಾರ್ಯದರ್ಶಿ ದೇವರಾಜೇಗೌಡ ತಿಳಿಸಿದರು.
ದೇವಸ್ಥಾನದ ಮರು ಪ್ರತಿಷ್ಠಾಪನೆ ಅಂಗವಾಗಿ ಸೋಮವಾರ ಐದು ಜನರ ಪುರೋಹಿತರ ತಂಡ ಪೂಜಾ-ಕೈಂಕರ್ಯ ನೆರವೇರಿಸಿತು. ದೇವಿಯ ಮೂರ್ತಿಯನ್ನು ಗ್ರಾಮದ ಕೆರೆಗೆ ತೆಗೆದುಕೊಂಡು ಹೋಗಿ ಗಂಗಾಸ್ನಾನ ಮಾಡಿಸಲಾಯಿತು. ಬಳಿಕ ಮಹಿಳೆಯರು ಕಳಸ ಹೊತ್ತುಕೊಂಡು ಮೆರವಣಿಗೆ ಮೂಲಕ ದೇವಿಯ ಮೂರ್ತಿಯನ್ನು ದೇವಸ್ಥಾನಕ್ಕೆ ಕರೆತಂದರು. ನಂತರ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ ದೇವಸ್ಥಾನವನ್ನು ಲೋಕಾರ್ಪಣೆಗೊಳಿಸಲಾಯಿತು.
ಜಾತ್ರಾ ಸಮಿತಿ ಅಧ್ಯಕ್ಷ ಬಿ.ಬಿ.ಗಿರೀಶ್, ಉಪಾಧ್ಯಕ್ಷ ಮಂಜುನಾಥಗೌಡ, ಗೌರವಾಧ್ಯಕ್ಷ ಹೇಮಚಂದ್ರ ಹಲವರಿದ್ದರು.