ಮದ್ದೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಅತಿವೇಗ, ಅಜಾಗರೂಕತೆ ಚಾಲನೆ ಹಾಗೂ ಸಂಚಾರ ನಿಯಮ ಪಾಲಿಸದ ಕಾರಣ ಒಂದಿಲ್ಲೊಂದು ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಪೊಲೀಸ್ ಇಲಾಖೆ ಅಪಘಾತಗಳ ಸಂಖ್ಯೆ ಕಡಿಮೆಗೊಳಿಸಲು ದಂಡಾಸ್ತ್ರ ಪ್ರಯೋಗಿಸುತ್ತಿದ್ದರೂ ವಾಹನ ಸವಾರರು ಬುದ್ಧಿ ಮಾತ್ರ ಕಲಿಯುತ್ತಿಲ್ಲ.
ಅಪಘಾತ ಪ್ರಕರಣಗಳ ಕಡಿವಾಣಕ್ಕೆ ಸಂಚಾರ ಹಾಗೂ ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಖುದ್ದು ಎಂಟ್ರಿ ಕೊಟ್ಟು ಪರಿಶೀಲನೆ ಕೈಗೊಂಡು ರಾಮನಗರ ಮತ್ತು ಮಂಡ್ಯ ಜಿಲ್ಲಾ ಪೊಲೀಸರಿಗೆ ಹೆದ್ದಾರಿಯಲ್ಲಿ ಅಪಘಾತಗಳನ್ನು ತಡೆಗಟ್ಟಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸೂಚನೆ ಕೂಡ ನೀಡಿದ್ದರು. ಹೀಗಾಗಿ ಮಂಡ್ಯ ಜಿಲ್ಲೆಯ ಮದ್ದೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಕ್ಸ್‌ಪ್ರೆಸ್ ವೇಯಲ್ಲಿ ನಿಗದಿತ 100 ಕಿ.ಮೀ. ವೇಗಮಿತಿ, ಸೀಟ್ ಬೆಲ್ಟ್, ಹೆಲ್ಮೆಟ್ ಹಾಕದಿರುವುದು ಸೇರಿದಂತೆ ಹಲವು ಸಂಚಾರ ನಿಯಮ ಉಲ್ಲಂಘನೆ ಮಾಡಿದ ಚಾಲಕರ ವಿರುದ್ಧ ಪೊಲೀಸರು, ಕಳೆದೊಂದು ತಿಂಗಳಲ್ಲಿ 1554 ಪ್ರಕರಣ ದಾಖಲಿಸಿದ್ದಾರೆ. ಜತೆಗೆ ಸುಮಾರು 11 ಲಕ್ಷ ರೂ.ಗೂ ಹೆಚ್ಚು ದಂಡವನ್ನು ಸಂಗ್ರಹಿಸಿದ್ದಾರೆ.
ಎಕ್ಸ್ ಪ್ರೆಸ್ ವೇಯಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿ ಊಟ, ತಿಂಡಿ, ವಿಶ್ರಾಂತಿ ಪಡೆಯುತ್ತಿದ್ದ ವಾಹನ ಸವಾರರ ವಿರುದ್ಧವೂ ಮದ್ದೂರು ಸಂಚಾರ ಪೊಲೀಸರು ದಂಡಾಸ್ತ್ರ ಪ್ರಯೋಗ ಮಾಡಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುತ್ತಿದ್ದಾರೆ.