ಗದಗ: ಇಲ್ಲಿನ ಕೆ.ಸಿ. ರಾಣಿ ರಸ್ತೆಯಲ್ಲಿರುವ ದಂಡಪ್ಪ ಮಾನ್ವಿ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಿಂದ ಬಿಸಿ ನೀರಿನ ಪೂರೈಕೆ ಸ್ಥಗಿತಗೊಂಡಿದೆ. ಹೀಗಾಗಿ ಬಾಣಂತಿಯರು ಹಾಗೂ ಕಂದಮ್ಮಗಳ ಸ್ನಾನಕ್ಕೆ ಬಿಸಿ ನೀರು ಒದಗಿಸಲು ಸಂಬಂಧಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಜಿಲ್ಲಾಸ್ಪತ್ರೆಯ ಅಧೀನದಲ್ಲಿರುವ ದಂಡಪ್ಪ ಮಾನ್ವಿ ಆಸ್ಪತ್ರೆಯು ಪ್ರಸೂತಿ ಹಾಗೂ ಚಿಕ್ಕಮಕ್ಕಳ ಆರೈಕೆಗೆ ಉತ್ತಮ ಹೆಸರು ಹೊಂದಿದೆ. ಹೀಗಾಗಿ ಗದಗ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಯ ಬಡ ಮತ್ತು ಗ್ರಾಮೀಣ ಜನರು ಇದೇ ಆಸ್ಪತ್ರೆಯನ್ನು ಅವಲಂಭಿಸಿದ್ದಾರೆ. 100 ಹಾಸಿಗೆಗಳ ಸಾಮರ್ಥ್ಯ ಹೊಂದಿರುವ ಈ ಆಸ್ಪತ್ರೆಯಲ್ಲಿ ನಿತ್ಯ 20ಕ್ಕಿಂತ ಹೆಚ್ಚು ಹೆರಿಗೆ ಮಾಡಲಾಗುತ್ತದೆ.
ಹೆಚ್ಚಿದ ರೋಗಿಗಳ ಸಂಖ್ಯೆ:
ಕೋವಿಡ್-19 ಮೊದಲ ಮತ್ತು ಎರಡನೇ ಅಲೆ ಸಂದರ್ಭದಲ್ಲಿ ಜಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆ ಗೆ ಆದ್ಯತೆ ನೀಡಲಾಯಿತು. ಹೆರಿಗೆ, ಗರ್ಭಿಣಿಯರು, ಬಾಣಂತಿಯರು ಹಾಗೂ ಚಿಕ್ಕ ಮಕ್ಕಳ ಚಿಕಿತ್ಸೆಯನ್ನು ಸಂಪೂರ್ಣವಾಗಿ ಮಾನ್ವಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆಸ್ಪತ್ರೆಯಲ್ಲಿ ಹೊರ ಮತ್ತು ಒಳ ರೋಗಿಗಳ ಚಿಕಿತ್ಸೆ ಮತ್ತು ಪ್ರಸೂತಿ ಪ್ರಕರಣಗಳು ಹೆಚ್ಚಿವೆ. ಕೋವಿಡ್ ಪೂರ್ವಕ್ಕೆ ಹೋಲಿಸಿದರೆ ಈಗ ದಂಡಪ್ಪ ಮಾನ್ವಿ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ದ್ವಿಗುಣವಾಗಿದೆ. 100 ಹಾಸಿಗೆಗಳ ಕಟ್ಟಡದಲ್ಲಿ 150ಕ್ಕಿಂತ ಹೆಚ್ಚು ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ.
1 ಲೀಟರ್ ಬಿಸಿ ನೀರಿಗೆ 10 ರೂ.!
ದಂಡಪ್ಪ ಮಾನ್ವಿ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 100 ಜನರಿಗೆ ಸಾಕಾಗುವಂತೆ ಬಿಸಿ ನೀರು ಒದಗಿಸಲು ಘಟಕ ಸ್ಥಾಪಿಸಲಾಗಿತ್ತು. ಬಾಯ್ಲರ್ನ ಕಂಪ್ರೆಸರ್ ಕೆಟ್ಟಿದ್ದರಿಂದ ಬಿಸಿ ನೀರಿನ ಪೂರೈಕೆ ಸ್ಥಗಿತಗೊಂಡಿದೆ. ರೋಗಿಗಳ ಸಂಬಂಧಿಕರು ಬಿಸಿ ನೀರಿಗಾಗಿ ಆಸ್ಪತ್ರೆಯ ಸಿಬ್ಬಂದಿಯನ್ನು ವಿಚಾರಿಸಿದರೆ, ರಸ್ತೆ ಬದಿಗಿರುವ ಹೋಟೆಲ್ಗಳತ್ತ ಬೊಟ್ಟು ಮಾಡುತ್ತಾರೆ. ಹೋಟೆಲ್ಗಳಲ್ಲಿ 1 ಲೀಟರ್ ಬಿಸಿ ನೀರಿಗೆ 10 ರೂ. ಪಡೆಯುತ್ತಿದ್ದಾರೆ. ಬಾಣಂತಿಯರು ಮತ್ತು ಮಕ್ಕಳ ಸ್ನಾನಕ್ಕಾಗಿ ಪ್ರತಿನಿತ್ಯ 100- 150 ರೂ. ಖರ್ಚು ಮಾಡುವಂತಾಗಿದೆ. ಈ ಹಿಂದೆ ಲಾಕ್ಡೌನ್ ಸಮಯದಲ್ಲಿ ಬಿಸಿ ನೀರಿಗಾಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ ಎನ್ನುತ್ತಾರೆ ಒಳರೋಗಿಗಳ ಸಂಬಂಧಿಕರು.
ದಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬಿಸಿ ನೀರಿನ ಘಟಕ ಕಳೆದ ಒಂದು ತಿಂಗಳಿಂದ ದುರಸ್ತಿಗೆ ಒಳಗಾಗಿದೆ. ಈ ಕುರಿತು ಗುತ್ತಿಗೆ ಸಂಸ್ಥೆಗೆ ತಿಳಿಸಲಾಗಿದ್ದು, ನಾಲ್ಕೈದು ದಿನಗಳಲ್ಲಿ ಸಮಸ್ಯೆ ಪರಿಹಾರವಾಗಬಹುದು.| ಎಂ.ಎಸ್. ಕರಿಗೌಡರ, ಜಿಲ್ಲಾ ಶಸ್ತ್ರಚಿಕಿತ್ಸಕ,