ಹೊಸಕೋಟೆ: ಕರೊನಾ ತಡೆಯುವ ಸಲುವಾಗಿ ವಿವಿಧ ಇಲಾಖೆ ಅಧಿಕಾರಿಗಳ ಟಾಸ್ಕ್ ರ್ೆರ್ಸ್ ತಂಡ ರಚಿಸಿ ತಾಲೂಕಿನ ಪ್ರತಿ ಹೋಬಳಿಗಳಿಗೂ ನೇಮಿಸಲಾಗಿದೆ. ಆದರೆ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿದ್ದು ಬಿಟ್ಟು ಯಾವುದೇ ಸಾಧನೆ ಕಂಡು ಬರುತ್ತಿಲ್ಲ ಎಂದು ಶಾಸಕ ಶರತ್ ಬಚ್ಚೇಗೌಡ ಬೇಸರ ವ್ಯಕ್ತಪಡಿಸಿದರು.
ನಗರದ ತಾಪಂ ಸಭಾಂಗಣದಲ್ಲಿ ಕರೊನಾ ತಡೆ ಸಂಬಂಧ ಬುಧವಾರ ಕರೆಯಲಾಗಿದ್ದ ತಾಲೂಕು ನೋಡಲ್ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ತಾಲೂಕಿನಲ್ಲಿ ಕೆಲ ನೋಡಲ್ ಅಧಿಕಾರಿಗಳು ಮಾತ್ರ ನಿಯಮಾನುಸಾರ ಹೋಬಳಿಮಟ್ಟದ ಅಧಿಕಾರಿಗಳೊಂದಿಗೆ ಸಭೆ ನೆಡೆಸಿ ಕರೊನಾ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದು, ನಗರ ಪ್ರದೇಶದಲ್ಲಿ ಪ್ರಗತಿ ಹಿಂದುಳಿದಿದೆ ಎಂದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಪ್ರತಿದಿನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ತಡೆಗೆ ಯಾವ ರೀತಿಯ ಕ್ರಮ ಕೈಗೊಂಡಿದ್ದೀರಾ, ಎಷ್ಟು ಜನ ಸೊಂಕಿತರಿದ್ದಾರೆ, ಯಾವ ಯಾವ ವಾರ್ಡ್‌ಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಲು ತಡಬಡಾಯಿಸಿದ ನಗರಸಭೆ ಆಯುಕ್ತ ಪರಮೇಶ್, ನಗರದಲ್ಲಿ ಈಗಾಗಲೇ ಒಂದು ಬಾರಿ ಸ್ಯಾನಿಟೈಸ್ ಮಾಡಲಾಗಿದೆ ಹಾಗೂ ಎರಡನೇ ಬಾರಿಗೆ ಸ್ಯಾನಿಟೈಸ್ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂಬ ಉತ್ತರ ಬಿಟ್ಟು ಬೇರಾವುದೇ ಮಾಹಿತಿ ನೀಡಲಿಲ್ಲ.
ಕೂಡಲೇ ಹೋಮ್ ಐಸುಲೇಷನ್ ಆದವರ ವಿವರ ಹಾಗೂ ಆ ಭಾಗದಲ್ಲಿ ಎಷ್ಟರ ಮಟ್ಟಿಗೆ ಸೋಂಕು ಹರಡುತ್ತಿದೆ. ಸೋಂಕಿತ ಪ್ರದೇಶವನ್ನು ಸೀಲ್‌ಡೌನ್ ಮಾಡಲು ಬೇಕಾದ ಮಾನದಂಡಗಳ ಸಮೇತ ಕಾರ್ಯಪ್ರವೃತ್ತರಾಗುವಂತೆ ಆದೇಶಿಸಿದರು.
ತಹಸೀಲ್ದಾರ್ ಗೀತಾ ಮಾತನಾಡಿ, ತಾಲೂಕಿನ ಪ್ರತಿಯೊಂದು ಹೋಬಳಿಯ ನೋಡಲ್ ಅಧಿಕಾರಿ ಸ್ಥಳೀಯ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ, ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಸಿಬ್ಬಂದಿ ಹಾಗೂ ಆಯಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ ನೆಡೆಸಿ ಕರೊನಾ ತಡೆಗೆ ಕ್ರಮ ಕೈಗೊಳ್ಳಬೇಕು ಎಂದರು.
ತಾಪಂ ಇಒ ಶ್ರೀನಾಥ್‌ಗೌಡ ಮಾತನಾಡಿ, ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಸೋಂಕಿತರ ವಿವರವನ್ನು ಆರೋಗ್ಯ ಇಲಾಖೆಯಿಂದ ಪಡೆದ ಎರಡು ಗಂಟೆಗಳಲ್ಲಿ ಸೋಂಕಿತರ ವಾಸ ಸ್ಥಳ ಹಾಗೂ ಸುತ್ತ ಮುತ್ತಲಿನ ಪ್ರದೇಶದಲ್ಲಿ ಸ್ಯಾನಿಟೈಸ್ ಮಾಡಲಾಗುತ್ತಿದೆ ಎಂದರು.
ತಾಲೂಕು ವೈದ್ಯಾಧಿಕಾರಿ ಡಾ. ಉಮೇಶ್ ಮಾತನಾಡಿ, ತಾಲೂಕಿನಲ್ಲಿ ಈಗಾಗಲೇ 31,046 ಮಂದಿಗೆ ಕರೊನಾ ಮೊದಲ ಹಂತದ ಲಸಿಕೆ ಹಾಕಲಾಗಿದ್ದು, 6,346 ಮಂದಿಗೆ ಎರಡನೇ ಹಂತದ ಲಸಿಕೆ ಅಭಿಯಾನ ನೆಡೆಯುತ್ತಿದೆ ಹಾಗೂ ಏಪ್ರಿಲ್ 1 ರಿಂದ 27 ರ ವರೆಗೆ ತಾಲೂಕಿನಾದ್ಯಂತ 2,105 ಸೊಂಕು ಪ್ರಕಗಳು ಕಂಡುಬಂದಿದ್ದು, 696 ಮಂದಿ ಗುಣವಾಗಿದ್ದಾರೆ. 39 ಮಂದಿ ಮೃತ ಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ, ತೋಟಗಾರಿಕೆ ಇಲಾಖೆ ಅಧಿಕಾರಿ ಪ್ರಶಾಂತ್, ಕೃಷಿ ಇಲಾಖೆ ಅಧಿಕಾರಿ ಪ್ರಸನ್ನ, ಆರೋಗ್ಯ ಇಲಾಖೆ ಅಧಿಕಾರಿ ಗುರುರಾಜ್ ಹಾಜರಿದ್ದರು.