ಚಾಮರಾಜನಗರ: ಬೈಕ್ ಮೇಲೆ ಪೊಲೀಸ್ ಎಂದು ಬರೆಸಿಕೊಂಡು ಹೆಲ್ಮೆಟ್ ಧರಿಸದೆ ಹೋಗುತ್ತಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ನೋಟೀಸ್ ನೀಡಿದ್ದ ಬೈಕ್ ಮಾಲೀಕ ಶನಿವಾರ ದಂಡ ಪಾವತಿ ಮಾಡಿದ್ದಾರೆ.
ನಗರದ ಅಗ್ನಿಶಾಮಕ ದಳದ ಚಾಲಕ ಕೆ.ಚಂದ್ರಶೇಖರ್ ಚಾಮರಾಜನಗರ ಸಂಚಾರ ಪೊಲೀಸ್ ಠಾಣೆಯಲ್ಲಿ 2 ಸಾವಿರ ರೂ. ದಂಡ ಪಾವತಿ ಮಾಡಿದ್ದಾರೆ. ಪೊಲೀಸ್ ಹೆಸರಿದ್ದ ನಂಬರ್ ಪ್ಲೇಟ್‌ಗೆ 500 ರೂ., ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದ್ದಕ್ಕೆ 500 ರೂ., ಇನ್ಶುರೆನ್ಸ್ ಇಲ್ಲದ್ದಕ್ಕೆ 1000 ಸಂಚಾರ ಠಾಣೆಯ ಇನ್ಸ್‌ಪೆಕ್ಟರ್ ರವಿಕುಮಾರ್‌ಗೆ ದಂಡ ಕಟ್ಟಿದ್ದಾರೆ.
ನೋಟೀಸ್ ಕೊಟ್ಟಿದ್ದ ಎಸ್ಪಿ: ಮಾ.12ರಂದು ನಗರದ ಸತ್ತಿ ರಸ್ತೆಯಲ್ಲಿ ಹೆಲ್ಮೆಟ್ ಧರಿಸದೆ, ಪೊಲೀಸ್ ಎಂದು ಸ್ಟಿಕ್ಕರ್ ಅಂಟಿಸಿರುವ ಬೈಕ್‌ನಲ್ಲಿ ಹೋಗುತ್ತಿದ್ದ ಸವಾರನ ವಿಡಿಯೋವನ್ನು ಸೆರೆ ಹಿಡಿದ ಸಾರ್ವಜನಿಕರು ಸಾಮಾಜಿಕ ಜಾಲತಾಣದ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಬೈಕ್ ನಂಬರ್ ಆಧರಿಸಿ ಮಾಲೀಕನ ವಿಳಾಸ ಪತ್ತೆ ಮಾಡಲಾಯಿತು. ಬೆಂಗಳೂರಿನ ಹೊಸಕೆರೆಹಳ್ಳಿಯ ಕೆ.ಚಂದ್ರಶೇಖರ್‌ಗೆ ಎಸ್ಪಿ ಡಾ.ಬಿ.ಟಿ.ಕವಿತಾ ನೋಟೀಸ್ ನೀಡಿ, ಮಾ.12ರಂದು ನಗರದ ಪಟ್ಟಣದ ಸರ್ಕಾರಿ ಬಸ್ ಡಿಪೋ ಎದುರು ನಿಮ್ಮ ಮಾಲೀಕತ್ವದ ಬೈಕ್‌ನಲ್ಲಿ ಹೆಲ್ಮೆಟ್ ಇಲ್ಲದೆ, ಗಾಡಿ ಮೇಲೆ ಪೊಲೀಸ್ ಎಂಬ ಸ್ಟಿಕ್ಕರ್ ಅಂಟಿಸಿಕೊಂಡು ಸಂಚಾರ ಮಾಡಿರುವುದು ಕಾನೂನು ಬಾಹಿರವಾಗಿದೆ. ಈ ನೋಟೀಸ್ ತಲುಪಿದ ಕೂಡಲೇ ಚಾಮರಾಜನಗರ ಸಂಚಾರ ಪೊಲೀಸ್ ಠಾಣೆಗೆ ಬಂದು ದಂಡ ಪಾವತಿ ಮಾಡಬೇಕು. ಇಲ್ಲವಾದಲ್ಲಿ ನಿಮ್ಮ ವಿರುದ್ಧ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು ಎಂದಿದ್ದರು. ಅಲ್ಲದೇ, ಪೊಲೀಸರೂ ಸಹ ಕೆ.ಚಂದ್ರಶೇಖರ್ ಅವರ ಪತ್ತೆಗೆ ಮುಂದಾಗಿದ್ದಾಗ ಅವರು ಚಾಮರಾಜನಗರದ ಅಗ್ನಿಶಾಮಕದಳ ಠಾಣೆಯಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಯಿತು. ಅವರನ್ನು ಸಂಪರ್ಕಿಸಿದ ನಿಯಮ ಉಲ್ಲಂಘನೆಯ ದಂಡ 2000 ರೂ.ಗಳನ್ನು ಪಾವತಿ ಮಾಡಿದ್ದಾರೆ. ಇವರ ತಂದೆ ಪೊಲೀಸ್ ಕೆಲಸದಲ್ಲಿದ್ದರು. ಅವರ ಬೈಕ್ ಓಡಿಸುತ್ತಿದ್ದರಿಂದ ಪೊಲೀಸ್ ಸ್ಟಿಕ್ಕರ್ ಹಾಕಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.