ಮಂಗಳೂರು: ತರಕಾರಿ, ಹಣ್ಣು ಸಗಟು ವ್ಯಾಪಾರಸ್ಥರು ಬುಧವಾರವೂ ಬೈಕಂಪಾಡಿ ಎಪಿಎಂಸಿ ಪ್ರಾಂಗಣದಲ್ಲಿ ವಹಿವಾಟು ನಡೆಸದ ಕಾರಣ ದ.ಕ.ಜಿಲ್ಲೆಯಲ್ಲಿ ತರಕಾರಿ ದರ ಮತ್ತಷ್ಟು ಏರಿಕೆಯಾಗಿದೆ.
ಕೆ.ಜಿ.ಗೆ ಮಂಗಳವಾರಕ್ಕಿಂತ ತಲಾ 2 ರೂ.ನಿಂದ 5 ರೂ.ತನಕ ದರ ಹೆಚ್ಚಳವಾಗಿದೆ. ಸೆಂಟ್ರಲ್ ಮಾರುಕಟ್ಟೆಯಲ್ಲಿ ಮಂಗಳವಾರ ವ್ಯಾಪಾರಕ್ಕೆ ಅವಕಾಶ ಸಿಗದ ಕಾರಣ ವ್ಯಾಪಾರಸ್ಥರು ಹಿಂತಿರುಗಿದ್ದರು. ಎಪಿಎಂಸಿ ಪ್ರಾಂಗಣದಲ್ಲಿ ಹಲವು ಸಮಸ್ಯೆಗಳಿರುವುದರಿಂದ ಮಳೆಗಾಲದಲ್ಲಿ ಅಲ್ಲಿ ವ್ಯಾಪಾರಕ್ಕೆ ಕಷ್ಟವಿದೆ. ಹಾವುಗಳ ಕಾಟ ವಿಪರೀತವಾಗಿದೆ. ಆದ್ದರಿಂದ ನಗರದಲ್ಲೇ ಅವಕಾಶ ಮಾಡಿಕೊಡಬೇಕು ಎಂದು ವ್ಯಾಪಾರಸ್ಥರು ಬೇಡಿಕೆ ಮುಂದಿಟ್ಟಿದ್ದಾರೆ. ಅಂಗಡಿಗಳಲ್ಲಿ ಸಂಗ್ರಹ ಖಾಲಿಯಾಗುತ್ತಿದ್ದು, ದರ ಹೆಚ್ಚಳವಾಗುತ್ತಿದೆ.
ಟೊಮ್ಯಾಟೊಗೆ 25 ರೂ.ನಿಂದ 28 ರೂ. ತೊಂಡೆಕಾಯಿ 45 ರೂ.ನಿಂದ 48 ರೂ., ಬೀಟ್‌ರೋಟ್ 30 ರೂ. ನಿಂದ 35ರೂ., ಕ್ಯಾಬೇಜ್ 30 ರೂ. ನಿಂದ 35 ರೂ., ಕ್ಯಾರೆಟ್ 60 ರೂ.ನಿಂದ 65 ರೂ., ಸೋರೆಕಾಯಿ 30 ರೂ.ನಿಂದ 35 ರೂ., ಆಲೂಗಡ್ಡೆ 40 ರೂ. ನಿಂದ 45 ರೂ., ಹೀರೆಕಾಯಿ 55 ರೂ.ನಿಂದ 60 ರೂ., ಕಾಯಿ ಮೆಣಸು 70 ನಿಂದ 75 ರೂ., ಸೌತೆ 20 ರೂ. ನಿಂದ 25 ರೂ., ಅಲಸಂಡೆ 55 ರೂ.ನಿಂದ 60 ರೂ, ಕಿತ್ತಳೆ 100 ರೂ.ನಿಂದ 110 ರೂ. ಗೆ ದರ ಹೆಚ್ಚಿಸಿ ಚಿಲ್ಲರೆ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದಾರೆ. ಸಗಟು ವ್ಯಾಪಾರಿಗಳು ಇನ್ನೂ ಎರಡು ದಿನ ವಹಿವಾಟು ನಡೆಸದಿದ್ದರೆ ತರಕಾರಿ, ಹಣ್ಣುಗಳ ದರ ಗಗನಕ್ಕೇರುವ ಸಾಧ್ಯತೆ ಇದೆ.