ಅರಕಲಗೂಡು ತಾಲೂಕಿನ ಬಸವಾಪಟ್ಟಣ ಗ್ರಾಮದಲ್ಲಿ ನನೆಗುದಿಗೆ ಬಿದ್ದಿರುವ ಮಾಗಡಿ-ಸೋಮವಾರಪೇಟೆ ಮಾರ್ಗದ ರಸ್ತೆ ದುಸ್ಥಿತಿಯನ್ನು ಬುಧವಾರ ಶಾಸಕ ಎ. ಮಂಜು ಪರಿಶೀಲಿಸಿದರು. ಶಿವರಾಜ್, ಮಹೇಂದ್ರ ಕುಮಾರ್, ಕಂಬೇಗೌಡ, ಪ್ರಕಾಶ್, ಹರೀಶ್, ಪುಟ್ಟಸ್ವಾಮಿ ಇದ್ದರು.  
ಜಿಲ್ಲೆ

ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ

ಅರಕಲಗೂಡು: ತಾಲೂಕಿನ ಬಸವಾಪಟ್ಟಣ ಗ್ರಾಮದಲ್ಲಿ ನನೆಗುದಿಗೆ ಬಿದ್ದಿರುವ ಮಾಗಡಿ- ಸೋಮವಾರಪೇಟೆ ಮಾರ್ಗದ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಶಾಸಕ ಎ.ಮಂಜು ಇಂಜಿನಿಯರ್‌ಗೆ ತಾಕೀತು ಮಾಡಿದರು.

ಬಸವಾಪಟ್ಟಣ ಗ್ರಾಪಂ ಕಚೇರಿ ಸಭಾಂಗಣದಲ್ಲಿ ಕೆಆರ್‌ಡಿಸಿಎಲ್ ಇಂಜಿನಿಯರ್ ಶಿವರಾಜ್ ಮತ್ತು ಗ್ರಾಮಸ್ಥರೊಂದಿಗೆ ರಸ್ತೆ ಕಾಮಗಾರಿ ಪರಿಶೀಲಿಸಿ ಮಾತನಾಡಿ, ಗ್ರಾಮದ ಪರಿಮಿತಿಯಲ್ಲಿ ರಸ್ತೆ ಅಭಿವೃದ್ಧಿ ಕಾಣದೆ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಗ್ರಾಮದ ಮುಖ್ಯರಸ್ತೆ ಹಾದು ಹೋಗಿರುವ ಭಾಗದಲ್ಲಿ 11 ಮೀ. ರಸ್ತೆ ವಿಸ್ತರಣೆ ಮಾಡಿ, ಎರಡು ಬದಿ ತಲಾ ಎರಡೂವರೆ ಮೀ ಅಗಲ ಚರಂಡಿ ನಿರ್ಮಿಸಬೇಕು. ಕಾಮಗಾರಿ ಶೀಘ್ರ ಮುಗಿಸಬೇಕು ಎಂದು ಇಂಜಿನಿಯರ್ ಶಿವರಾಜ್‌ಗೆ ಖಡಕ್ ಸೂಚನೆ ನೀಡಿದರು.

ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯಿಂದ ಮನೆ ಕಳೆದುಕೊಳ್ಳುವ ಸಂತ್ರಸ್ತರು ಸೂಕ್ತ ದಾಖಲೆ ಒದಗಿಸಿದರೆ ನಿಯಮಾನುಸಾರ ಪರಿಹಾರ ಸಿಗಲಿದೆ ಎಂದು ಮಾಹಿತಿ ನೀಡಿದರು.

ಗ್ರಾಪಂ ಪಿಡಿಒ ಮಂಜುನಾಥ್ ಮಾತನಾಡಿ, ರಸ್ತೆ ಕಾಮಗಾರಿಗೆ ಗ್ರಾಪಂ ಕಚೇರಿಯ ಮುಂಭಾಗದ ಜಾಗ ಹೋಗಲಿದ್ದು, ಗುತ್ತಿಗೆದಾರರಿಂದ ಪರಿಹಾರ ದೊರಕಿಸಿಕೊಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು. ಗ್ರಾಪಂ ಮಾಜಿ ಅಧ್ಯಕ್ಷ ಮಹೇಂದ್ರ ಕುಮಾರ್, ಮುಖಂಡರಾದ ಕಂಬೇಗೌಡ, ಪ್ರಕಾಶ್, ಹರೀಶ್, ಗ್ರಾಮ ಸಹಾಯಕ ಪುಟ್ಟಸ್ವಾಮಿ ಇದ್ದರು.