ಜಿಲ್ಲೆ

ತ್ರಿವೇಣಿ ಸಂಗಮವಾಗಲಿದೆ ಶಿರಾ ತಾಲೂಕು

ಶಾಸಕ ಡಾ.ಟಿ.ಬಿ.ಜಯಚಂದ್ರ ಹೇಳಿಕೆ, ಭರ್ತಿಯಾದ ಬ್ಯಾರೇಜ್​ಗಳಿಗೆ ಬಾಗಿನ ಅರ್ಪಣೆ

ಪಟ್ಟನಾಯಕನಹಳ್ಳಿ: ಹರಿಯುವ ನೀರನ್ನು ನಿಲ್ಲಿಸಿ, ನಿಂತ ನೀರನ್ನು ಇಂಗಿಸಿ ಅಂತರ್ಜಲ ಹೆಚ್ಚಿಸುವ ಉದ್ದೇಶದೊಂದಿಗೆ ಶಿರಾ ತಾಲೂಕಿನಲ್ಲಿ 121 ಬ್ಯಾರೇಜ್​ಗಳನ್ನು ನಿಮಾರ್ಣ ಮಾಡಿದ್ದು, 44 ಬ್ಯಾರೇಜ್​ಗಳು ಭರ್ತಿಯಾಗಿ ಸಮೃದ್ಧಿ ಕಾಣುತ್ತಿರುವುದು ನನ್ನ ರಾಜಕೀಯ ಜೀವನದಲ್ಲಿ ಹೆಚ್ಚು ಹರ್ಷ ಮೂಡಿಸಿದೆ ಎಂದು ಶಾಸಕ ಡಾ.ಟಿ.ಬಿ.ಜಯಚಂದ್ರ ಹೇಳಿದರು.

ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ಹುಣಸೆಹಳ್ಳಿ, ಹೇರೂರು, ಮೇಲುಕೋಟೆ ಗ್ರಾಮಗಳಲ್ಲಿ ಭರ್ತಿಯಾಗಿರುವ ಬ್ಯಾರೇಜ್​ಗಳಲ್ಲಿ ಗಂಗಾ ಪೂಜೆ ಹಾಗೂ ಬಾಗಿನ ಅರ್ಪಿಸಿ ಮಾತನಾಡಿ, ಶಿರಾ ಕ್ಷೇತ್ರವನ್ನು ತ್ರಿವೇಣಿ ಸಂಗಮ ಮಾಡುವ ಸಂಕಲ್ಪ ನನ್ನದಾಗಿದ್ದು, ಎತ್ತಿನಹೊಳೆ, ಅಪ್ಪರ್​ ಭದ್ರ, ಹೇಮಾವತಿ ನದಿ ನೀರು ತಾಲೂಕಿನಲ್ಲಿ ಸಮಾಗಮವಾಗುವ ದಿನಗಳು ಶೀಘ್ರದಲ್ಲಿಯೇ ಬರಲಿದೆ. ಆ ದಿನ ಶಿರಾ ಪಾಲಿಗೆ ಐತಿಹಾಸಿಕ ದಿನವಾಗಲಿದೆ ಎಂದರು.

ಗೌಡಗೆರೆ ಹೋಬಳಿಯ ಹುಣಸೆಹಳ್ಳಿ, ಹೇರೂರು, ಮೇಳೆಕೋಟೆ ಸೇರಿ ಹಲವಾರು ಗ್ರಾಮಗಳಿಗೆ ನೀರು ಕೊಡಬೇಕೆಂಬ ಉತ್ಸಾಹ ನನ್ನದಾಗಿದ್ದು, ವಾಣಿವಿಲಾಸ ಡ್ಯಾಮ್​ನಿಂದ ಗಾಯತ್ರಿ ಜಲಾಶಯಕ್ಕೆ ನೀತು ನೀರು ತರುವ ಕ್ರಿಯಾಯೋಜನೆ ಸಿದ್ಧಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಮೌಖಿಕವಾಗಿ ಸೂಚಿಸಿದ್ದು, ಶೀಘ್ರದಲ್ಲೇ ಕ್ರಿಯಾ ಯೋಜನೆ ರೂಪುಗೊಳ್ಳಲಿದೆ ಎಂದು ತಿಳಿಸಿದರು.

ಶಿರಾ ಕ್ಷೇತ್ರಕ್ಕೆ ಹೇಮಾವತಿ ನೀರು ತರಲೇ ಬೇಕೆಂಬ ಸಂಕಲ್ಪದೊಂದಿಗೆ ಹೋರಾಟ ಮಾಡಿದ ಪರಿಣಾಮ 21 ವರ್ಷಗಳಿಂದ ಕಳ್ಳಂಬೆಳ್ಳ, ಶಿರಾ ದೊಡ್ಡ ಕೆರೆ, ಮದಲೂರು ಕೆರೆ ಸೇರಿ ಕಳ್ಳಂಬೆಳ್ಳ ವ್ಯಾಪ್ತಿಯ ಹನ್ನೊಂದು ಕೆರೆಗಳು ಭರ್ತಿಯಾಗಲು ಸಾಧ್ಯವಾಯಿತು. ನಾನು ರಾಜಕೀಯ ಕ್ಷೇತ್ರ ಪ್ರವೇಶ ಮಾಡಿ ಶಾಸಕರಾಗಿ ಇಂದಿಗೆ 48 ವರ್ಷ ತುಂಬಿದ್ದು, ಶಿರಾ ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ನೀಗಿಸಿದ್ದೇನೆ ಎಂಬ ಸಾರ್ಥಕ ಮನೋಭಾವ ಮತ್ತು ತೃಪ್ತಿ ಇದೆ. ಮುಂದಿನ ಐವತ್ತು ವರ್ಷ ಶಿರಾದಲ್ಲಿ ಕುಡಿಯುವ ನೀರಿನ ಸಮಸ್ಯೆ ಬರುವುದಿಲ್ಲ. ಇದು ಜನ ನನಗೆ ಕೂಡ ಶಕ್ತಿಗೆ, ಶಿರಾ ತಾಲೂಕಿನಲ್ಲಿ ಗಂಗಾಮಾತೆಯನ್ನು ಪ್ರತಿಷ್ಠಾಪನೆ ಮಾಡಿ ಜಲಧಾರೆ ಮಾಡಿರುವುದು ನನ್ನ ರಾಜಕೀಯ ಜೀವನದಲ್ಲಿ ಎಂದೂ ಮರೆಯಲು ಸಾಧ್ಯವಿಲ್ಲ. ಎಲ್ಲ ದೇವರುಗಳಿಗಿಂತ ಗಂಗಾದೇವಿಯೇ ಜೀವಂತ ದೇವತೆ ಎಂದರು.

ತಾಪಂ ಮಾಜಿ ಸದಸ್ಯ ಸುದರ್ಶನ್​, ಮುಖಂಡರಾದ ಹೇರೂರು ಲಕ್ಷಿ$್ಮರಾಜ್​, ಪದ್ಮನಾಭ, ಮೋಹನ ಗೌಡ, ದಂಡಿಕೆರೆ ತಿಪ್ಪೇಸ್ವಾಮಿ, ಹೊಸೂರು ಪುಟ್ಟ ಜುಂಜಯ್ಯ, ಕುಂಟನ ಹಟ್ಟಿ ನಾಗರಾಜು, ತಾಪಂ ಮಾಜಿ ಸದಸ್ಯ ನಾಗರಾಜು, ಗುತ್ತಿಗೆದಾರ ಹನುಮಂತ ರಾಯ, ಲೋಕೋಪಯೋಗಿ ಇಲಾಖೆ ಎಇಇ ರಮೇಶ್​, ಗ್ರಾಮೀಣ ಅಭಿವೃದ್ಧಿ ಇಲಾಖೆ ಎಇಇ ಗಂಗಾಧರ್​,

ಅಭಿಯಂತರ ಕಾಮರಾಜು, ಪಿಡಿಒ ಆರ್​.ನಾಗರಾಜ್​ ಇದ್ದರು.