ಅಥಣಿ: ದೇಶದ ಐತಿಹಾಸಿಕ ವ್ಯಾಸನ ತೋಳದ ಮೆರವಣಿಗೆ ನಡೆಯುವುದು ಕಾಶಿಯಲ್ಲಿ ನಂತರ ಅಥಣಿ ಗಚ್ಚಿನಮಠದಲ್ಲಿ ಎಂಬುದು ಇತಿಹಾಸ. ಹೀಗಾಗಿ ಅಥಣಿಯನ್ನು ದಕ್ಷಿಣದ ಪುಣ್ಯಕಾಶಿ ಎಂದು ಬಣ್ಣಿಸಲಾಗುತ್ತದೆ ಎಂದು ಗಚ್ಚಿನಮಠದ ಶಿವಬಸವ ಸ್ವಾಮೀಜಿ ಹೇಳಿದರು.
ಗಚ್ಚಿನಮಠದ ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳ 100ನೇ ಜಾತ್ರಾ ಮಹೋತ್ಸವ ಮತ್ತು ಲಿಂ. ಚನ್ನಬಸವ ಸ್ವಾಮೀಜಿ ಅವರ 42ನೇ ಸ್ಮರಣೋತ್ಸವ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಅಡ್ಡಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಅಪ್ಪ ಮುರುೇಂದ್ರ ಶಿವಯೋಗಿಗಳ ಸೇವೆಯನ್ನು ತ್ರಿಕರ್ಣ ಪೂರ್ವಕವಾಗಿ ಚನ್ನಬಸವ ಸ್ವಾಮೀಜಿ ಮಾಡುತ್ತ ಬಂದು ಭಕ್ತರಿಗೆ ಅರಿವು, ಅನ್ನ, ಆಶ್ರಯ ನೀಡಿ ದಾಸೋಹ ಮೂರ್ತಿಗಳಾಗಿ ಮಠದ ಶ್ರೇಯೋಭಿವದ್ಧಿಗೆ ಶ್ರಮಿಸಿದವರು. ಅಂತಹ ಪರಂಪರೆಯನ್ನು ಅಥಣಿ ಭಕ್ತರ ಸಹಕಾರದಿಂದ ನಾಡಿಗೆ ಮಾದರಿಯಾಗುವಂತೆ ಮುನ್ನಡೆಸುತ್ತಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.
ಪಲ್ಲಕ್ಕಿ ಉತ್ಸವಕ್ಕೆ ಚಾಲನೆ: ಬೆಳಗ್ಗೆ ಶಿವಯೋಗಿಗಳ ಗದ್ದುಗೆಗೆ ಅಭಿಷೇಕ, ಷೋಡೋಪಚಾರ, ಮಹಾಪೂಜೆ, ಬಿಲ್ವಾರ್ಚನೆ ಜರುಗಿತು. ನಂತರ ಶಿವಯೋಗಿಗಳ ಜನ್ಮಸ್ಥಳ ನದಿ ಇಂಗಳಗಾವದಿಂದ ಬಾಲಶಿವಯೋಗಿಗಳ ಪಲ್ಲಕ್ಕಿ ಉತ್ಸವ ಗಚ್ಚಿನಮಠ ತಲುಪಿತು. ಬಸವಣ್ಣನವರ ವಚನ ಸಂಪುಟ ಹಾಗೂ ಶಿವಯೋಗಿಗಳು ಬರೆದ ಹಸ್ತಪ್ರತಿಗಳ ಭವ್ಯ ಮೆರವಣಿಗೆ ಸಕಲ ವಾದ್ಯ ವೃಂದಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಗವಿಮಠದ ಪುರಾತನೇಶ್ವರ ದೇವಾಲಯ ತಲುಪಿ ಪೂಜೆ ಸಲ್ಲಿಸಿ ನಂತರ ಗಚ್ಚಿನಮಠಕ್ಕೆ ಆಗಮಿಸಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜನರಿಗೆ ಅಲ್ಲಲ್ಲಿ ಪಾನಕ, ಮಜ್ಜಿಗೆ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿತ್ತು. ಯುವಕರು, ಸಾರ್ವಜನಿಕರು ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡರು. ಬಳಿಕ ವ್ಯಾಸನ ತೋಳ ಮೆರವಣಿಗೆ ಸಂಭ್ರಮದಿಂದ ಜರುಗಿತು.
ಒಂದು ತಿಂಗಳ ಕಾಲ ಬಸವ ಪುರಾಣ: ಗಚ್ಚಿನಮಠದ ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವದ ಅಂಗವಾಗಿ ಏ.18 ರಿಂದ ಮೇ 20ರ ವರೆಗೆ ಒಂದು ತಿಂಗಳ ಕಾಲ ‘ಬಸವ ಮಹಾಪುರಾಣ’ ಜರುಗಲಿದ್ದು, ಪ್ರತಿದಿನ ಸಂಜೆ 6:30ಕ್ಕೆ ಗಚ್ಚಿನಮಠದ ವಿದ್ಯಾಪೀಠ ಶಾಲಾ ಆವರಣದಲ್ಲಿ ಜರುಗಲಿದೆ. ಬಿದರಿ ಕಲ್ಮಠದ ಶಿವಲಿಂಗ ಸ್ವಾಮೀಜಿ ಪ್ರವಚನಕ್ಕೆ ಚಾಲನೆ ನೀಡುವರು. ಗಚ್ಚಿನಮಠದ ಶಿವಬಸವ ಸ್ವಾಮೀಜಿ ನೇತೃತ್ವ ವಹಿಸುವರು. ಬಸವ ಪುರಾಣ ನುಡಿ ಸೇವೆಯನ್ನು ಧಾರವಾಡ ಜಿಲ್ಲೆಯ ಉಪ್ಪಿನ ಬೇಟಗೇರಿಯ ಕುಮಾರ ವಿರೂಪಾಕ್ಷ ಸ್ವಾಮೀಜಿ ನೀಡಲಿದ್ದಾರೆ ಎಂದು ಶ್ರೀಮಠ ಮಾಹಿತಿ ನೀಡಿದೆ.